ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ(ಯುಜಿಸಿ)ದಲ್ಲಿ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಬುಧವಾರ ಕೈಪಿಡಿ ಬಿಡುಗಡೆ ಮಾಡಲಾಯಿತು. ಪ್ರೊ.ಎನ್.ಕೆ.ಲೋಲಾಕ್ಷಿ, ಪ್ರೊ.ವಿ.ಷಣ್ಮುಗಂ, ಪ್ರೊ.ಎಚ್.ಪಿ.ಜ್ಯೋತಿ, ಪ್ರೊ.ಡಿ.ವಿಜಯಲಕ್ಷ್ಮೀ, ಪ್ರೊ.ಬಿ.ಪಿ.ಆಶಾಕುಮಾರಿ, ಡಾ.ಟಿ.ಕೆ.ಕೆಂಪೇಗೌಡ ಇದ್ದರು. 
ಮೈಸೂರು

ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಶಕ್ತಿ ಬೆಳೆಸಿ: ಪ್ರೊ.ಎನ್.ಕೆ.ಲೋಲಾಕ್ಷಿ ಸಲಹೆ

ಆರ್.ಕೃಷ್ಣ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ 100 ಅಂಕ ತೆಗೆಯುವ ಪರೀಕ್ಷೆ, ಪಾಠ ಮುಖ್ಯ ಅಲ್ಲ
  • ಕ್ರಿಯಾತ್ಮಕವಾಗಿ ಏನನ್ನು ಸೃಷ್ಟಿ ಮಾಡುತ್ತಾರೆ ಎಂಬುದು ಮುಖ್ಯ
ಮೈಸೂರು:ವಿದ್ಯಾರ್ಥಿಗಳಿಗೆ ಸೃಜನಾತ್ಮಕವಾಗಿ ಯೋಚನೆ ಮಾಡುವ ಶಕ್ತಿ ಬೆಳೆಸುವುದರ ಜತೆಗೆ ಜೀವನಕ್ಕಾಗಿ ಬೇಕಾಗುವ ಕೌಶಲಗಳನ್ನು ಮೈಗೂಡಿಸುವ ಕೆಲಸ ಮಾಡಬೇಕು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಹೇಳಿದರು.
ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ(ಯುಜಿಸಿ), ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜು, ಕನ್ನಡ ವಿಭಾಗ ಹಾಗೂ ಕನ್ನಡ ಅಧ್ಯಯನ ಮಂಡಳಿಯಿಂದ ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ 100 ಅಂಕ ತೆಗೆಯುವ ಪರೀಕ್ಷೆ, ಪಾಠ ಮುಖ್ಯ ಅಲ್ಲ. ಅವರು ಎಷ್ಟೇ ಅಂಕ ಪಡೆದರೂ ಕ್ರಿಯಾತ್ಮಕವಾಗಿ ಏನನ್ನು ಸೃಷ್ಟಿ ಮಾಡುತ್ತಾರೆ ಎಂಬುದು ಮುಖ್ಯ. ವಿದ್ಯಾರ್ಥಿಗಳಲ್ಲಿ ರಚನಾತ್ಮಕವಾಗಿ ಚಿಂತಿಸುವಂತೆ ಸಿದ್ಧಪಡಿಸುವ ಅಗತ್ಯ ಇಂದು ಹೆಚ್ಚು ಪ್ರಸ್ತುತ ಎಂದರು.
ಮಕ್ಕಳಿಗೆ ಪಠ್ಯಪುಸ್ತಕಗಳು ಅನುಭವವಾಗಬೇಕು. ಬರೆಯುವ ಶಕ್ತಿ, ವಿಮರ್ಶಿಸುವ ಕಲೆ ಬೆಳೆಯುವಂತೆ ಮಾಡಬೇಕು. ಆದರೆ ಇಂದು ಪರೀಕ್ಷೆಯಲ್ಲಿ ಅಂಕ ತೆಗೆಯುವುದಕ್ಕಾಗಿ ಎನ್ನುವ ಭಾವನೆ ಹೋಗಿ ಜ್ಞಾನಕ್ಕಾಗಿ ಶಿಕ್ಷಣ ಎನ್ನುವುದನ್ನು ಮನದಟ್ಟು ಮಾಡಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿಯೇ ಉತ್ತರ ಭಾಗದ ಸಾಹಿತಿಗಳು ದಕ್ಷಿಣ ಭಾಗದವರಿಗೆ, ದಕ್ಷಿಣ ಭಾಗದವರು ಉತ್ತರ ಭಾಗದವರಿಗೆ ಪರಿಚಯ ಇಲ್ಲದಂತಾಗಿದೆ. ಹೀಗಾಗಿ, ಮಂಡೇಸ್ವಾಮಿ, ಮಲೆ ಮಹದೇಶ್ವರದಂತಹ ಕಾವ್ಯಗಳು ಒಂದು ಪ್ರದೇಶಕ್ಕೆ ಸೀಮಿತಗೊಂಡಿವೆ. ಆದ್ದರಿಂದ ಎನ್‌ಇಪಿ ಮತ್ತು ಎಸ್‌ಇಪಿ ಜಾರಿ ಸಂದರ್ಭದಲ್ಲಿ ಪ್ರಾದೇಶಿಕವಾದಂತಹ ಪಠ್ಯಗಳನ್ನು ಹೆಚ್ಚು ಪರಿಚಯಿಸಬೇಕು ಎಂದು ಹೇಳಿದರು.
ಅದಕ್ಕಾಗಿ ಸಮಗ್ರವಾಗಿ ತಿಳಿದುಕೊಳ್ಳಲು ವಿದ್ಯಾರ್ಥಿಗಳು ತಮ್ಮದೇ ಆದ ಗ್ರಂಥಾಲಯವನ್ನು ಇಟ್ಟುಕೊಳ್ಳಬೇಕು. ಆ ಗ್ರಂಥಾಲಯವನ್ನು ಬೆಳೆಸಬೇಕು. ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳ ಅವಶ್ಯಕತೆ ಇದೆ ಎಂದರು.
ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ಎಂಎಂಟಿಟಿಸಿ ನಿರ್ದೇಶಕಿ ಪ್ರೊ.ಎಚ್.ಪಿ.ಜ್ಯೋತಿ, ಮಹಾರಾಜ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮೀ, ಕನ್ನಡ ಸಂಘದ ಸಂಚಾಲಕಿ ಪ್ರೊ.ಬಿ.ಪಿ.ಆಶಾಕುಮಾರಿ, ಕನ್ನಡ ಅಧ್ಯಯನ ಮಂಡಳಿ ಸದಸ್ಯ ಡಾ.ಟಿ.ಕೆ.ಕೆಂಪೇಗೌಡ ಇದ್ದರು.