ಎಚ್.ಡಿ.ಕೋಟೆ ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ 2026-27ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಮಠಾಧ್ಯಕ್ಷ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಉದ್ಘಾಟಿಸಿದರು. ಚಂದ್ರೇಗೌಡ, ಜೆ.ಎನ್.ವೆಂಕಟೇಶ್, ಭೈರೇಗೌಡ, ಎ.ಸಿ.ಭೈರಪ್ಪ, ಎ.ಜೆ.ಕಾಳೇಗೌಡ, ಕೃಷ್ಣೇಗೌಡ ಇತರರಿದ್ದರು.
ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕರೆ
ಎಚ್.ಡಿ.ಕೋಟೆ: ವಿದ್ಯೆ ಎಂಬುದು ನಿಂತ ನೀರಾಗಬಾರದು. ಅದು ಸದಾ ಹರಿಯುವ ಶುದ್ಧ ಗಂಗಾಜಲದಂತೆ ನಿರಂತರವಾಗಿ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಾಗಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭ ಹಾಗೂ 2026-27ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಭ್ಯಾಸವು ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯಾವಂತನಿಗೆ ಸಮಾಜದಲ್ಲಿ ಸಹಜವಾಗಿ ಗೌರವ ದೊರೆಯುತ್ತದೆ. ಆ ಗೌರವಕ್ಕೆ ತಕ್ಕಂತೆ ಬದುಕುವ ಜವಾಬ್ದಾರಿಯೂ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ತಾಲೂಕಿನಲ್ಲಿ ಕಾಲೇಜು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಬೇರೆ ಊರುಗಳಿಗೆ ತೆರಳಬೇಕಾಗುತ್ತಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಂಕಷ್ಟವನ್ನು ಮನಗಂಡ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ತಾಲೂಕು ಕೇಂದ್ರದಲ್ಲೇ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿದರು. ಆ ಸೇವೆಯನ್ನು ವಿದ್ಯಾರ್ಥಿಗಳು ಸ್ಮರಿಸಿ ಶಿಕ್ಷಣದ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದ ಕೆಲವರು ತಮ್ಮ ತಂದೆ-ತಾಯಿಯನ್ನೇ ಗೌರವಿಸುವುದಿಲ್ಲ ಎಂಬುದು ಬೇಸರದ ಸಂಗತಿ. ಆದರೆ ಅನಕ್ಷರಸ್ಥರೆಂದು ಕರೆಯಲಾಗುವ ಅನೇಕರು ತಂದೆ-ತಾಯಿಯನ್ನು ಅತ್ಯಂತ ಪ್ರೀತಿ, ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಕ್ಷರಸ್ಥರಾಗಿರುವ ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಕಾಪಾಡಿಕೊಂಡು ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಚಂದ್ರೇಗೌಡ ಮಾತನಾಡಿ, ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಯಶಸ್ಸು ಸಾಧ್ಯವಾಗುತ್ತದೆ. ಹೊಸ ಕನಸುಗಳನ್ನು ಸಾಕಾರಗೊಳಿಸಲು ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹಳೆಯ ತತ್ವಗಳೇ ದಾರಿದೀಪವಾಗುತ್ತವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ವಿದ್ಯಾಭ್ಯಾಸದ ಗುರಿ ಹೆಚ್ಚು ಅಂಕ ಗಳಿಸುವುದು ಅಥವಾ ಚಿನ್ನದ ಪದಕಗಳನ್ನು ಪಡೆಯುವುದಷ್ಟೇ ಆಗಬಾರದು. ಸಮಾಜದಲ್ಲಿ ಹೇಗೆ ಬದುಕಬೇಕು, ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಹೇಗೆ ಪಾಲಿಸಬೇಕು ಎಂಬುದನ್ನು ಕಲಿಸುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ. ವಿದ್ಯೆ ಎಂಬುದು ಯಾರಿಂದಲೂ ಅಪಹರಿಸಲಾಗದ ಅಮೂಲ್ಯ ಆಸ್ತಿ. ಅಂತಹ ಸಂಪತ್ತನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ನಿರಂತರವಾಗಿ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪದವಿ ವಿಭಾಗದ ಪ್ರಾಂಶುಪಾಲ ಜೆ.ಎನ್.ವೆಂಕಟೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಭೈರೇಗೌಡ, ಎ.ಸಿ.ಭೈರಪ್ಪ, ಮುಖಂಡ ಎ.ಜೆ. ಕಾಳೇಗೌಡ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಮಾಜಿ ಸದಸ್ಯ ಕೃಷ್ಣೇಗೌಡ, ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಜಗದೀಶ್, ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಡಿ.ಸಿ.ಸ್ವಾಮಿ, ಬೊಪ್ಪನಹಳ್ಳಿ ಭಾಸ್ಕರ್, ಮಹದೇವು, ಯೋಗೇಶ್, ನಿಂಗೇಗೌಡ ಇದ್ದರು.