ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಹಾಗೂ ಅನ್ವೇಷಣಾ ಸೇವಾ ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಡಿ.ತಿಮ್ಮಯ್ಯ, ಕೋಟೆ ಎಂ.ಶಿವಣ್ಣ, ಡಾ. ಎಂ.ಜಿ.ಆರ್.ಅರಸು, ಅಮರನಾಥ್ ರಾಜೇ ಅರಸ್, ಶ್ರೀನಿವಾಸ ಬಹದ್ದೂರ್, ಎಚ್.ಎಂ.ಟಿ.ಲಿಂಗರಾಜೇ ಅರಸ್ ಇತರರು ಇದ್ದರು. 
ಮೈಸೂರು

ದೇವರಾಜ ಅರಸು ಕೊಡುಗೆ ಅಜರಾಮರ:ವಿಧಾನ ಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಭೂಮಿ ಸೇರಿದಂತೆ ಸ್ವಾಭಿಮಾನದಿಂದ ಬದುಕಲು ಅಗತ್ಯ ಸೌಲಭ್ಯಗಳನ್ನು ಕೊಟ್ಟ ಅರಸು ಮಾದರಿಯಾಗಿದ್ದಾರೆ
  • ತಳವರ್ಗದವರನ್ನು ಗುರುತಿಸಿ ರಾಜಕೀಯವಾಗಿ ಶಕ್ತಿ ತುಂಬಿದವರು. ಕಷ್ಟದಲ್ಲಿ ಸಹಾಯ ಮಾಡಿ ಜೀವನಕ್ಕೆ ದಾರಿ ತೋರಿದವರು
ಮೈಸೂರು:ಬಹಳ ಕಷ್ಟಕರವಾದ ಸನ್ನಿವೇಶದಲ್ಲಿ ತಳವರ್ಗದವರಿಗೆ ಬದುಕಲು ಭೂಮಿ ಕೊಟ್ಟು ಸಹಾಯ ಮಾಡಿದ ಡಿ.ದೇವರಾಜ ಅರಸು ಅವರು ಸದಾ ಕಾಲ ಅಜರಾಮರವಾಗಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಡಾ. ಡಿ.ತಿಮ್ಮಯ್ಯ ಹೇಳಿದರು.
ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಹಾಗೂ ಅನ್ವೇಷಣಾ ಸೇವಾ ಟ್ರಸ್ಟ್‌ನಿಂದ ಡಿ.ದೇವರಾಜ ಅರಸು ಅವರ 44ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ದಿ ಇನ್ಸಿಟ್ಯೂಟ್ ಆಫ್ ಇಂಜಿನಿಯರ್ಸ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಧಕರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡವರು, ದಲಿತರು, ಶೋಷಿತರ ಪರ ಆಡಳಿತ ಮಾಡಿದ್ದಲ್ಲದೇ, ಭೂಮಿ ಸೇರಿದಂತೆ ಸ್ವಾಭಿಮಾನದಿಂದ ಬದುಕಲು ಅಗತ್ಯ ಸೌಲಭ್ಯಗಳನ್ನು ಕೊಟ್ಟ ಅರಸು ಮಾದರಿಯಾಗಿದ್ದಾರೆ. ಅವರು ತಳವರ್ಗದವರನ್ನು ಗುರುತಿಸಿ ರಾಜಕೀಯವಾಗಿ ಶಕ್ತಿ ತುಂಬಿದವರು. ಕಷ್ಟದಲ್ಲಿ ಸಹಾಯ ಮಾಡಿ ಜೀವನಕ್ಕೆ ದಾರಿ ತೋರಿದವರು ಎಂದು ಬಣ್ಣಿಸಿದರು.
ಅರಸು ಕುಟುಂಬದಲ್ಲಿ ಬಂದರೂ ದಲಿತರು, ಹಿಂದುಳಿದ, ಶೋಷಿತರ ಪರವಾದ ಕಲ್ಯಾಣ ಕಾರ್ಯಕ್ರಮ ಜಾರಿಗೆ ತಂದವರು. ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಸಾಧಕರನ್ನು ಗುರುತಿಸಿ ಅರಸು ಹೆಸರಿನಲ್ಲಿ ಪ್ರಶಸ್ತಿ ಕೊಡುತ್ತಿರುವುದು ಉತ್ತಮ ಕಾರ್ಯ. ರಾಜ್ಯಾದ್ಯಂತ ಅರಸು ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ರಮಣಶ್ರೀ ಪ್ರತಿಷ್ಠಾನದ ಸಂಸ್ಥಾಪಕ ನಾಡೋಜ ಎಸ್.ಷಡಕ್ಷರಿ, ಕೆಪಿಎ ಸಹಾಯಕ ನಿರ್ದೇಶಕ ಎಸ್.ಎನ್.ಸಂದೇಶ್‌ಕಮಾರ್, ಬೆಂಗಳೂರು ವಿವಿ ವಿಶ್ರಾಂತ ಕುಲಸಚಿವ ಡಾ.ಸುಂದರರಾಜೇ ಅರಸ್, ತುಮಕೂರಿನ ಸಂಶೋಧಕ ಡಾ.ಗಂಗಾಧರ ಕೊಡ್ಲಿಯವರ, ಮೈಸೂರಿನ ಕ್ರೈಸ್ಟ್ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲೆ ಮರ್ಲಿನ್ ಕ್ರಿಸ್ಟಬೆಲ್, ಪಿರಿಯಾಪಟ್ಟಣದ ರೋಟರಿಯ ಸಂಸ್ಥೆ ಸಹಾಯಕ ಗೌರ್ವನರ್ ತಿರುಮಲಾಪುರ ರಾಜೇಗೌಡ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅರಸು ಜಾಗೃತಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ.ಜಿ.ಆರ್.ಅರಸು, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಮರನಾಥ್ ರಾಜೇ ಅರಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಶ್ರೀನಿವಾಸ ಬಹದ್ದೂರ್, ಅನ್ವೇಷಣಾ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್ ಇತರರು ಇದ್ದರು.