ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಕಸಕಡ್ಡಿಗಳಿಂದ ತುಂಬಿರುವ ಚರಂಡಿ 
ಮೈಸೂರು

ಚುಂಚನಹಳ್ಳಿಯಲ್ಲಿ ಹದಗೆಟ್ಟ ಚರಂಡಿಗಳು

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಸೊಳ್ಳೆಗಳ ಕಾಟದಿಂದ ಬೇಸತ್ತ ಜನರು
  • ಅವ್ಯವಸ್ಥೆ ಸರಿಪಡಿಸಲು ಆಗ್ರಹ
ನಂಜನಗೂಡು: ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುಂಚನಹಳ್ಳಿ ಗ್ರಾಮದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಚರಂಡಿಗಳು ಗಬ್ಬೆದ್ದು ನಾರುತ್ತಿವೆ.
ಗ್ರಾಮದ ಶ್ರೀ ಮಣಿಯಮ್ಮ ದೇವಾಲಯದ ರಸ್ತೆ ಸೇರಿದಂತೆ ಗ್ರಾಮದ ವಿವಿಧ ಕಡೆ ಚರಂಡಿಗಳಲ್ಲಿ ಕಸಕಡ್ಡಿ ಕೊಳಚೆ ನೀರು, ತುಂಬಿಕೊಂಡು ದುರ್ನಾತ ಬೀರುತ್ತಿದೆ. ಇದರಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯಾದರೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಕಸಕಡ್ಡಿ ತುಂಬಿರುವ ಪರಿಣಾಮ ರಸ್ತೆಗೆ ಕೊಳಚೆ ನೀರು ಹರಿಯುವುದು ಸಾಮಾನ್ಯವಾಗಿದೆ.
ಚರಂಡಿಗಳನ್ನು ಸ್ವಚ್ಛ ಮಾಡುವಂತೆ ಹಲವು ಬಾರಿ ದೇವನೂರು ಗ್ರಾಮ ಪಂಚಾಯಿತಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ದೇವನೂರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಈ ಕೂಡಲೇ ಗಬ್ಬೆದ್ದು ನಾರುತ್ತಿರುವ ಚರಂಡಿಗಳನ್ನು ಸ್ವಚ್ಛ ಮಾಡಬೇಕು. ಇಲ್ಲವಾದಲ್ಲಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.