ನಗರ ಪೊಲೀಸರು ಮಂಗಳವಾರ ದೋಷಪೂರಿತ 378 ಸೈಲೆನ್ಸರ್‌ಗಳನ್ನು ರೋಲರ್ ಮೂಲಕ ನಾಶ ಪಡಿಸಿದರು. ಸೀಮಾ ಲಾಟ್ಕರ್, ಕೆ.ಎಸ್.ಸುಂದರ್‌ರಾಜ್, ಎಂ.ಶಿವಶಂಕರ್ ಇತರರಿದ್ದರು. 
ಮೈಸೂರು

ದೋಷಪೂರಿತ 378 ಸೈಲೆನ್ಸರ್‌ಗಳ ನಾಶ

ಮೈಸೂರು: ನಗರದಲ್ಲಿ ವಶಪಡಿಸಿಕೊಳ್ಳಲಾದ ಬೈಕ್‌ಗಳ ದೋಷಪೂರಿತ 378 ಸೈಲೆನ್ಸರ್‌ಗಳನ್ನು ಮಂಗಳವಾರ ರೋಲರ್ ಮೂಲಕ ನಾಶ ಪಡಿಸಲಾಯಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಉಪ ಪೊಲೀಸ್ ಆಯುಕ್ತ ಕೆ.ಎಸ್.ಸುಂದರ್‌ರಾಜ್ ಮತ್ತು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಶಿವಶಂಕರ್ ಸಮಕ್ಷಮದಲ್ಲಿ ಸಿದ್ದಾರ್ಥ ನಗರದ ಹಳೇ ಪೊಲೀಸ್ ಠಾಣೆ ಬಳಿ ನಾಶ ಪಡಿಸಲಾಯಿತು.
ಮೈಸೂರು ನಗರ ಸಂಚಾರ ವಿಭಾಗದ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2026 ಅಂಗವಾಗಿ ನಗರದಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಹಾಗೂ ವ್ಹೀಲಿಂಗ್ ನಿಯಂತ್ರಿಸುವ ಸಲುವಾಗಿ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಜನವರಿ ತಿಂಗಳಲ್ಲಿ ವಿಶೇಷ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಅದರಂತೆ ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಿವಿಧ ಸಂಚಾರಿ ಠಾಣೆ ವ್ಯಾಪ್ತಿಯ 378 ದ್ವಿಚಕ್ರ ವಾಹನಗಳನ್ನು ವಶಪಡಿಕೊಳ್ಳಲಾಗಿತ್ತು. ಸದರಿ ದೋಷಪೂರಿತ ಸೈಲೆನ್ಸರ್‌ಗಳನ್ನು ನಾಶಪಡಿಸಿ ವಿಲೇವಾರಿ ಮಾಡಲಾಗಿದೆ.
‘ದೋಷಪೂರಿತ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನಗಳ ಸವಾರರ ವಿರುದ್ಧ ಐಎಂವಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿಯೂ ವ್ಹೀಲಿಂಗ್ ಮಾಡುವವರ ಹಾಗೂ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆ ಮುಂದುವರೆಯಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಶಿವಶಂಕರ್ ತಿಳಿಸಿದ್ದಾರೆ.
4 ವೀಲಿಂಗ್ ಪ್ರಕರಣ ದಾಖಲು: ನಗರದ ವಿವಿಧ ಸಂಚಾರ ವಿಭಾಗದ ಠಾಣೆಗಳಲ್ಲಿ 2026ನೇ ಸಾಲಿನಲ್ಲಿ ಈವರೆಗೆ 4 ವ್ಹೀಲಿಂಗ್ ಪ್ರಕರಣ ದಾಖಲಾಗಿದೆ. ಈ ಪೈಕಿ ಸಿದ್ದಾರ್ಥ ಸಂಚಾರ ಠಾಣೆಯಲ್ಲಿ 3, ವಿವಿ ಪುರಂ ಠಾಣೆಯಲ್ಲಿ 1 ದಾಖಲಾಗಿದೆ. 2025ನೇ ಸಾಲಿನಲ್ಲಿ 15 ಪ್ರಕರಣ ದಾಖಲಾಗಿದ್ದವು. ದೇವರಾಜ ಸಂಚಾರ ಠಾಣೆಯಲ್ಲಿ 1, ಕೆ.ಆರ್. ಸಂಚಾರ 4, ಎನ್.ಆರ್. ಸಂಚಾರ 1, ಸಿದ್ದಾರ್ಥ ಸಂಚಾರ 4 ಹಾಗೂ ವಿವಿ ಪುರಂ ಸಂಚಾರ ಠಾಣೆಯಲ್ಲಿ 5 ಪ್ರಕರಣ ದಾಖಲಾಗಿದ್ದವು.
ಕೆ.ಆರ್.ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ, ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಧರ್ ನಾಯಕ್, ಎಸ್‌ಐ ಪ್ರಭು, ವಿವಿ ಪುರಂ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್ ಲವ, ದೇವರಾಜ ಟ್ರಾಫಿಕ್ ಠಾಣೆಯ ಇನ್‌ಸ್ಪೆಕ್ಟರ್ ಮಮತಾ, ಎನ್‌ಆರ್ ಸಂಚಾರ ಠಾಣೆಯ ಎಸ್‌ಐ ಸಿದ್ದೇಶ್ ಸೇರಿದಂತೆ ಸಿಬ್ಬಂದಿ ಇದ್ದರು.
  • mList ite