ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ನಗರ ಪಾಲಿಕೆಯ ಪ್ರಧಾನ ಕಚೇರಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 
ಮೈಸೂರು

ಪಾಲಿಕೆಯನ್ನು ಹಳೇ ಡಿಸಿ ಕಚೇರಿಗೆ ಸ್ಥಳಾಂತರಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಅರಮನೆ ನಗರಿಯ ಪಾರಂಪರಿಕತೆಯನ್ನು ಕಾಪಾಡಿ
  • ಪಾಲಿಕೆಯ ಆಯುಕ್ತರ ಕಚೇರಿ, ಮೇಯರ್ ಕಚೇರಿಯನ್ನು ಸ್ಥಳಾಂತರಿಸಿ
ಮೈಸೂರು: ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ನಗರ ಪಾಲಿಕೆಯ ಪ್ರಧಾನ ಕಚೇರಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆಯಿಂದ ನಗರ ಪಾಲಿಕೆ ಮುಂಭಾಗ  ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ಬೃಹತ್ ನಗರವಾಗಿ ಬೆಳೆಯುತ್ತಿರುವ ಮೈಸೂರು ಪಾಲಿಕೆ ಮೇಯರ್ ಹಾಗೂ ಆಯುಕ್ತರ ಕಚೇರಿಯಲ್ಲಿ ನಿರ್ವಹಣೆ ತೊಂದರೆಯಾಗುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು. 
ರಾಜ್ಯ ಸರ್ಕಾರ ಮಹಾನಗರ ಪಾಲಿಕೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಬೃಹತ್ ಮಹಾನಗರ ಪಾಲಿಕೆಯಾಗಿ ಘೋಷಣೆ ಮಾಡಿದೆ. ಪ್ರಸ್ತುತ ನಗರ ಪಾಲಿಕೆಯ ಆವರಣ, ಕೌನ್ಸಿಲ್ ಸಭಾಂಗಣ, ಪಾಲಿಕೆ ವಾಹನ ನಿಲುಗಡೆ ಚಿಕ್ಕದಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ಸದ್ಯಸರ ಸಂಖ್ಯೆ ಹೆಚ್ಚಾಗುವುದರಿಂದ ವಾಹನ ನಿಲುಗಡೆಗೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ಹೀಗಾಗಿ ಈಗಾಗಲೇ ಹಲವು ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಾಗಿ ಸೇವೆ ಸಲ್ಲಿಸಿರುವ ಪಾರಂಪರಿಕ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪುವ ಹಂತಕ್ಕೆ ಮೊದಲೇ ಜಿಲ್ಲಾಡಳಿತ ಎಚ್ಚೆತ್ತು ಹಳೇ ಜಿಲ್ಲಾಧಿಕಾರಿ ಕಚೇರಿಗೆ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.
ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯನ್ನು ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸುವ ಮೂಲಕ ಕಟ್ಟಡವನ್ನು ನವೀಕರಿಸಿ ಅರಮನೆ ನಗರಿಯ ಪಾರಂಪರಿಕತೆಯನ್ನು ಕಾಪಾಡಿಕೊಳ್ಳಬಹುದು. ಕಟ್ಟಡ ನಿರ್ವಹಣೆಯೂ ಆಗುತ್ತದೆ. ಅಲ್ಲದೆ ನಗರಪಾಲಿಕೆ ಕಚೇರಿ ಆವರಣದಲ್ಲಿ ಆಡಳಿತವೂ ಸುಗಮವಾಗುತ್ತದೆ ಎಂದು ಆಗ್ರಹಿಸಿದರು.
ನಗರದ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ಕೆಡವಲು ಸರ್ಕಾರ ಮುಂದಾಗಿದೆ. ಆದ್ದರಿಂದ ಇಂತದ್ದೇ ಸ್ಥಿತಿ ಹಳೇ ಜಿಲ್ಲಾಧಿಕಾರಿ ಕಚೇರಿಗೆ ಬಾರದಿರಲಿ. ಆದ್ದರಿಂದ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡಿ, ನವೀಕರಿಸಿ, ಪಾಲಿಕೆಯ ಆಯುಕ್ತರ ಕಚೇರಿ, ಮೇಯರ್ ಕಚೇರಿಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದರು. 
ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಚಾಮರಾಜು ಮಂಡಕಳ್ಳಿ, ಗೋಪಿ, ಮಾದಪ್ಪ, ಎಲ್‌ಐಸಿ ಸಿದ್ದಪ್ಪ, ಸ್ವಾಮಿ, ಮಹದೇವಸ್ವಾಮಿ, ಚೆಲುವರಾಯಸ್ವಾಮಿ, ಚಿನ್ನಪ್ಪ, ಶಿವುಗೌಡ, ಗೋವಿಂದರಾಜು, ಹರೀಶ್, ಸ್ವಾಮಿಗೈಡ್, ಸುನೀಲ್ ಇತರರು ಇದ್ದರು.