ಹಾರಂಗಿ ಐದನೇ ವಿತರಣಾ ನಾಲೆಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾರಂಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮಂಗಳವಾರ ತೆರಳಿ ಮನವಿ ಸಲ್ಲಿಸಿದರು. 
ಮೈಸೂರು

ಹಾರಂಗಿ ಐದನೇ ವಿತರಣಾ ನಾಲೆಗೆ ನೀರು ಬಿಡಲು ಆಗ್ರಹ

ಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಮನವಿ ಸಲ್ಲಿಕೆ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ, ಹೊನ್ನಾಪುರ ಹಾಗೂ ಚಾಮರಾಯನಕೋಟೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹಾರಂಗಿ ಐದನೇ ವಿತರಣಾ ನಾಲೆಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಕುಶಾಲನಗರದ ಹಾರಂಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ದೊಡ್ಡಕಮರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಎನ್.ಹರೀಶ್ ಮಾತನಾಡಿ, ಹಾರಂಗಿ ಜಲಾಶಯದಲ್ಲಿ ನೀರಿನ ಲಭ್ಯತೆ ಇದ್ದರೂ ಐದನೇ ವಿತರಣಾ ನಾಲೆಗೆ ಸಮರ್ಪಕವಾಗಿ ನೀರು ಹರಿಸದಿರುವುದರಿಂದ ಈ ಭಾಗದ ರೈತರಿಗೆ ತೊಂದರೆಯಾಗಿದೆ. ನಾಲೆ ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ನೀರಿನ ಅಗತ್ಯವಿದ್ದು, ಅಧಿಕಾರಿಗಳು ಕೂಡಲೇ ನಾಲೆಗೆ ನೀರು ಹರಿಸಿ ರೈತರ ಹಿತ ಕಾಪಾಡಬೇಕು. ಸೂಳೆಕೋಟೆ, ಹೊನ್ನಾಪುರ ಹಾಗೂ ಚಾಮರಾಯನಕೋಟೆ ವ್ಯಾಪ್ತಿಯ ಹಲವು ಗ್ರಾಮಗಳ ಕೃಷಿ ಪ್ರದೇಶಗಳಿಗೆ ಈ ನಾಲೆಯಿಂದ ನೀರು ಲಭ್ಯವಾಗುತ್ತದೆ. ಪ್ರಸ್ತುತ ಗದ್ದೆ ನಾಟಿ ಕಾರ್ಯಾ ಆರಂಭವಾಗುತ್ತಿದ್ದು, ಕೃಷಿ ಚಟುವಟಿಕೆಗೆ ನೀರಿನ ಅವಶ್ಯಕತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಯಾವುದೇ ವಿಳಂಬ ಮಾಡದೆ ನಾಲೆಗೆ ನೀರು ಹರಿಸಬೇಕು ಎಂದು ಗ್ರಾಮಸ್ಥರು ಮನವಿಯಲ್ಲಿ ತಿಳಿಸಿದ್ದಾರೆ.
ಐದನೇ ವಿತರಣಾ ನಾಲೆಯ ಗೇಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ನಾಲೆಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಈಗಾಗಲೇ ಇತರ ವಿತರಣಾ ನಾಲೆಗಳಿಗೆ ನೀರು ಹರಿಸುತ್ತಿರುವುದರಿಂದ, ನೀರು ಹರಿಸುವಿಕೆಯನ್ನು ಮಧ್ಯದಲ್ಲಿ ಸ್ಥಗಿತಗೊಳಿಸಿ ಐದನೇ ನಾಲೆಯ ಗೇಟ್ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದಾಗಿ ಸ್ವಲ್ಪ ವಿಳಂಬವಾಗಿದೆ. ಒಂದೆರಡು ದಿನಗಳಲ್ಲಿ ಗೇಟ್‌ನ ಸಮಸ್ಯೆಯನ್ನು ಬಗೆಹರಿಸಿ ಐದನೇ ವಿತರಣಾ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಾರಂಗಿ ಇಲಾಖೆಯ ಎಇಇ ಗೋಕುಲ್ ಕುಡುವ ವಿಜಯವಾಣಿಗೆ ತಿಳಿಸಿದ್ದಾರೆ.
ಮುಖಂಡರಾದ ಸಿ.ಎಚ್.ಪರಮೇಶ್, ಸಿ.ಎಂ.ನಂಜುಂಡಸ್ವಾಮಿ, ಮಂಜುನಾಥ್, ಮಹೇಶ್ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.