ಪಿರಿಯಾಪಟ್ಟಣದ ಎಪಿಎಂಸಿ ಆವರಣದ ಮುಂಭಾಗ ಭಾರತೀಯ ಕಿಸಾನ್ ಸಂಘದ ವತಿಯಿಂದ ಅಂಚೆ ಚಳುವಳಿಗೆ ಚಾಲನೆ ನೀಡಲಾಯಿತು. ರವಿ ಗೆಂಡತೋರು, ಪಿ.ಸಿ.ಚಂದ್ರೆಗೌಡ, ಗಣೇಶ್, ಕೃಷ್ಣೆಗೌಡ ಇತರರು ಇದ್ದಾರೆ. 
ಮೈಸೂರು

ಲೀಟರ್ ಹಾಲಿಗೆ ಕನಿಷ್ಠ 50 ರೂ. ನೀಡಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ರವಿ ಗೆಂಡತ್ತೂರು ಒತ್ತಾಯ
  • ಅಂಚೆ ಚಳವಳಿ ಕಾರ್ಯಕ್ರಮ

ಪಿರಿಯಾಪಟ್ಟಣ:

ರಾಜ್ಯ ಸರ್ಕಾರ ಮತ್ತು ಕೆಎಂಎಫ್ ಒಕ್ಕೂಟಗಳು ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 50 ರೂ. ನೀಡಲು ಕ್ರಮ ಕೈಗೊಳ್ಳುವಂತೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಗೆಂಡತ್ತೂರು ಒತ್ತಾಯಿಸಿದರು.

ಪಟ್ಟಣದ ಎಪಿಎಂಸಿ ಅವರಣದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಆಯೋಜಿಸಿದ್ದ ಅಂಚೆ ಚಳವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದು, ಕೆಎಂಎಫ್ ಮತ್ತು ಸರ್ಕಾರದ ಪ್ರೋತ್ಸಾಹ ಧನ ಸೇರಿದಂತೆ ಪ್ರತಿ ಲೀ. ಹಾಲಿಗೆ ಕೇವಲ 40 ರೂ. ನೀಡುತ್ತಿದೆ. ಆದರೆ ಇಂದು ಹಸುಗಳಿಗೆ ವಿತರಿಸುವ ಆಹಾರದ ವೆಚ್ಚ ಗಗನಕೇರಿದ್ದು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಈ ಹಣ ಸಾಕಾಗುತ್ತಿಲ್ಲ. ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪ್ರೋತ್ಸಾಹ ಧನ ಸೇರಿ ಪ್ರತಿ ಲೀಟರ್ ಹಾಲಿಗೆ 60 ರೂ. ನಿಗದಿಪಡಿಸಿವೆ. ನಮ್ಮ ಸರ್ಕಾರವು ಸಹ ಹೈನುಗಾರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ಭಾರತೀಯ ಕಿಸಾನ್ ಸಂಘದಿಂದ ವಿವಿಧ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರ ಮೂಲಕ ಬೃಹತ್ ಅಂಚೆ ಚಳವಳಿ ಹಮ್ಮಿಕೊಂಡಿದ್ದು ಆ.29ರಂದು ಮೈಸೂರಿನ ಮುಖ್ಯ ಹಾಲು ಮಹಾಮಂಡಳಿಯ ಬಳಿ ಬೃಹತ್ ಚಳವಳಿ ಹಮ್ಮಿಕೊಂಡಿದೆ. ಹೈನುಗಾರರು, ರೈತರೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕೋಶಧ್ಯಕ್ಷ ಪಿ.ಸಿ.ಚಂದ್ರೆಗೌಡ ಮಾತನಾಡಿ, ಮುಂಗಾರು ವೈಫಲ್ಯದಿಂದ ಬರದ ಸಂಕಷ್ಟದಲ್ಲಿರುವ ರಾಜ್ಯದ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಮುಖ್ಯಮಂತ್ರಿಗಳು ತುರ್ತು ಬರ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಈಗಾಗಲೇ ರೈತರು ಬಿತ್ತನೆ ಬೀಜ, ರಸಗೊಬ್ಬರಗಳ ಖರೀದಿ, ಕೃಷಿ ಚಟುವಟಿಕೆಗಳಿಗೆ ವಿವಿಧ ಬ್ಯಾಂಕ್ ಗಳಲ್ಲಿ ಸಾಲಮಾಡಿದ್ದು ಈ ಸಾಲದ ಹಣವನ್ನು ಮರುಪಾವತಿ ಮಾಡಲಾಗದ ಸ್ಥಿತಿಯಲ್ಲಿ ಇದ್ದಾರೆ ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕಿದೆ ಎಂದರು.
ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಗಣೇಶ್ ಮರಡಿಯೂರು ಮಾತನಾಡಿ ಮುಂಗಾರು ಮಳೆ ವೈಪಲ್ಯದಿಂದ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಇಳುವರಿ ಕುಸಿತಗೊಂಡಿದ್ದು ತಂಬಾಕು ಖರೀದಿದಾರ ಕಂಪನಿಗಳು ಈ ಬಾರಿ ಪ್ರತಿ ಕೆಜಿ ತಂಬಾಕಿಗೆ ಕನಿಷ್ಠ 400 ರೂ ನಿಗದಿ ಪಡಿಸುವಂತೆ ತಂಬಾಕು ಮಂಡಳಿಗೆ ಅದೇಶಿಸಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣೆಗೌಡ ಉಪಾಧ್ಯಕ್ಷರಾದ ಶಿವಪ್ಪ, ಜಯರಾಮೇಗೌಡ,
ಸಿ.ಟಿ.ರಾಮೇಗೌಡ, ಅರವೇಗೌಡ, ಬೋರೆಹೊಸಹಳ್ಳಿ ಸ್ವಾಮಿ, ಮಹಾದೇವ ನಾಯಕ ಸೇರಿದದಂತೆ ವಿವಿಧ ಗ್ರಾಮಗಳಿಂದ ರೈತರು ಹಾಜರಿದ್ದರು.