ಹುಣಸೂರು ನಗರದ ತಾಲೂಕು ಕಚೇರಿ ಮುಂಭಾಗ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ವಿವಿಧ ಬೇಡಿಕೆಗೆಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ದೊಡ್ಡಹೆಜ್ಜೂರು ನಾಗೇಶ್, ಎಂ.ಕೆ.ಕಾಂತರಾಜು, ಶಿವರಾಜು, ರಾಜು ಇತರರಿದ್ದರು. 
ಮೈಸೂರು

ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ಆಯೋಜಿಸಲು ಆಗ್ರಹ

ಹುಣಸೂರು : ಕರ್ತವ್ಯ ನಿರ್ವಹಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಖಂಡಿಸಿ ಮತ್ತು ಉಪ ವಿಭಾಗಾಧಿಕಾರಿಗಳಿಂದ ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ಆಯೋಜಿಸಲು ಆಗ್ರಹ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ನಗರದ ತಾಲೂಕು ಕಚೇರಿ ಆವರಣದ ಮುಂಭಾಗ ಧರಣಿ ಆರಂಭಿಸಿದ ಸೇನೆಯ ಪದಾಧಿಕಾರಿಗಳು ಉಪವಿಭಾಗ ವ್ಯಾಪ್ತಿಯ ತಾಲೂಕುಗಳಲ್ಲಿ ದಲಿತರು ಮತ್ತು ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಸೇನೆಯ ಕಾರ್ಯಾಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್, ರೈತರ ಮತ್ತು ಶೋಷಿತ ಸಮಾಜದ ಮಾತೃಸಂಸ್ಥೆ ಎನಿಸಿಕೊಂಡಿರುವ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸೇವೆ ಸಿಗುವುದು ದುರ್ಲಬವಾಗಿದೆ. ಪೌತಿ ಖಾತೆ ಮಾಡಿಕೊಡುವ, ಪೌತಿ ಖಾತೆಯಲ್ಲಿ ಮರಣ ಹೊಂದಿದವರ ಹೆಸರು ತೆಗೆದು ಹಾಕುವ, ಜಮೀನಿಗೆ ರಸ್ತೆ ಬಿಡಿಸಿಕೊಡುವ, ಉಪವಿಭಾಗ ವ್ಯಾಪ್ತಿಯಲ್ಲಿ ಮೈಕ್ರೋಫೈನಾನ್ಸ್ ಹಾವಳಿ ಇವೇ ಮುಂತಾದವುಗಳ ಕುರಿತು ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ತಾಲೂಕಿನಲ್ಲಿ ಅರ್ಜಿಗಳು ರಾಶಿ ಬಿದ್ದಿವೆ. ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ. ಉಪವಿಭಾಗ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿನಲ್ಲಿ ತಿಂಗಳಿಗೊಮ್ಮೆ ಉಪ ವಿಭಾಗಾಧಿಕಾರಿ ಅವರು ಕುಂದುಕೊರತೆ ಸಭೆ ಆಯೋಜಿಸಿದಲ್ಲಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ.ಆದರೆ ಅದು ಆಗುತ್ತಿಲ್ಲ. ಗ್ರಾ.ಪಂ.ಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ದಲ್ಲಾಳಿಗಳಂತೆ ವರ್ತಿಸುತ್ತಿದಾರೆ. ಉಪವಿಭಾಗ ಮಟ್ಟದ ಇಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವರೆಗೂ ಧರಣಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ಕಾಂತರಾಜು, ಜಿಲ್ಲಾಧ್ಯಕ್ಷ ಮಂಜು ಆಯತನಹಳ್ಳಿ ಮಾತನಾಡಿದರು. ಸಿ.ಎಸ್.ಮಹದೇವು, ಪಿರಿಯಾಪಟ್ಟಣ ಶಿವರಾಜು, ರಾಜು ಇತರರು ಇದ್ದರು.