ಹುಣಸೂರು ನಗರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿ ಮುಂಭಾಗ ಕೊಳಗಟ್ಟ ಗ್ರಾಮದ ನಿವಾಸಿಗಳು ಪ್ರತಿಭಟನೆ ನಡೆಸಿದರು. ಕೊಳಗಟ್ಟ ಕೃಷ್ಣ, ನಾಗರಾಜು, ಸಿಂಗಯ್ಯ, ರಾಜು, ಗೌರಮ್ಮ ಇತರರಿದ್ದಾರೆ.  ಹುಣಸೂರು
ಮೈಸೂರು

ಕೊಳಗಟ್ಟದಲ್ಲಿ ಪಡಿತರ ಕೇಂದ್ರ ತೆರೆಯಲು ಆಗ್ರಹ

ಗ್ರಾಮಸ್ಥರಿಂದ ಹುಣಸೂರಿನಲ್ಲಿ ಪ್ರತಿಭಟನೆ

ಹುಣಸೂರು: ಪಡಿತರ ಸೌಲಭ್ಯವನ್ನು ತಮ್ಮ ಗ್ರಾಮದಲ್ಲೇ ನೀಡುವಂತೆ ಆಗ್ರಹಿಸಿ ತಾಲೂಕಿನ ಕೊಳಗಟ್ಟ ಗ್ರಾಮದ ದಲಿತ ಕುಟುಂಬಗಳು ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದ ನಿವಾಸಿಗಳು ಪಡಿತರ ಅಂಗಡಿ ತೆರೆಯಲು ಆಗ್ರಹಿಸಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ್‌ಬಣ) ಜಿಲ್ಲಾಧ್ಯಕ್ಷ ಕೊಳಗಟ್ಟ ಕೃಷ್ಣ, ಕೊಳಗಟ್ಟ ಗ್ರಾಮದಲ್ಲಿ 200ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸಿಸುತ್ತಿದ್ದು, ಈ ಕುಟುಂಬಗಳಿಗೆ ಎರಡು ವರ್ಷಗಳ ಹಿಂದೆ 3 ಕಿ.ಮೀ.ದೂರದ ಶ್ಯಾನುಭೋಗನಹಳ್ಳಿ ಸೊಸೈಟಿಯಲ್ಲಿ ಪಡಿತರ ನೀಡಲಾಗುತ್ತಿತ್ತು. ಗ್ರಾಮಸ್ಥರು ತಮ್ಮೂರಲ್ಲೇ ಪಡಿತರ ವಿತರಿಸಲು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಕೊಳಗಟ್ಟ ಗ್ರಾಮದಿಂದ 1 ಕಿ.ಮೀ.ದೂರದ ಕುಪ್ಪೆ ಗ್ರಾಮದಲ್ಲಿ ಖಾಸಗಿ ಕಟ್ಟಡದಲ್ಲಿ ಪಡಿತರ ವಿತರಣೆ ಕೇಂದ್ರ ಆರಂಭಿಸಿ ಶೀಘ್ರ ಕೊಳಗಟ್ಟ ಗ್ರಾಮದಲ್ಲೇ ವಿತರಿಸಲು ಕ್ರಮವಹಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಕೊಳಗಟ್ಟ ಗ್ರಾಮದಿಂದ ಕುಪ್ಪೆ ಗ್ರಾಮಕ್ಕೆ ಒಂದು ಕಿ.ಮೀ.ದೂರವಿದ್ದು, ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಾಗಿ ಕುಪ್ಪೆ ಗ್ರಾಮವನ್ನು ಸೇರಬೇಕಿದೆ. ವೃದ್ಧರು, ಮಹಿಳೆಯರು ಪಡಿತರಕ್ಕಾಗಿ ನಡೆದುಕೊಂಡೇ ಹೆದ್ದಾರಿಯಲ್ಲಿ ಸಾಗಬೇಕಿದ್ದು, ಅಪಘಾತಗಳು ಸಂಭವಿಸುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಮನವಿ ಸಲ್ಲಿಸಿದ್ದರೂ ಪ್ರಯೋಜನವಿಲ್ಲ:

ಬಡಕುಟುಂಬಗಳು ಪಡಿತರಕ್ಕಾಗಿ 2 ವರ್ಷಗಳಿಂದ ಪರದಾಡುತ್ತಿದ್ದು, ಇಲಾಖೆ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಇದೀಗ ಇ- ಕೆವೈಸಿ ಮಾಡಿಸಬೇಕೆಂದು ಸೂಚಿಸಿದ್ದು, ಇದಕ್ಕಾಗಿ ಕುಪ್ಪೆ ಗ್ರಾಮಕ್ಕೆ ಬರಲು ಸೂಚಿಸುತ್ತಿದ್ದಾರೆ. ನಮ್ಮೂರಿನಲ್ಲೇ ಖಾಸಗಿ ಕಟ್ಟಡವೊಂದರಲ್ಲಿ ಪಡಿತರ ವಿತರಿಸುವ ಕಾರ್ಯ ನಡೆಸಿದಲ್ಲಿ ಗ್ರಾಮದ ಎಲ್ಲ ಬಡಕುಟುಂಬಗಳಿಗೂ ಅನುಕೂಲವಾಗಲಿದೆ. ಈ ಕುರಿತು ಜಿಲ್ಲಾಧಿಕಾರಿಯಿಂದ ಆರಂಭಗೊಂಡು ತಾಲುಕು ಮಟ್ಟದ ಎಲ್ಲ ಅಧಿಕಾರಿಗಳಿಗೂ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ಆಹಾರ ಇಲಾಖೆ ಅಧಿಕಾರಿಗಳು ಸಮಸ್ಯೆಯ ಗಂಭೀರತೆ ಅರಿತು ಕೊಳಗಟ್ಟ ಗ್ರಾಮದಲ್ಲೇ ಪಡಿತರ ವಿತರಿಸಲು ಕ್ರಮವಹಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನಾಕಾರರಿಂದ ಆಹಾರ ಇಲಾಖೆ ನಿರೀಕ್ಷಕ ಸುರೇಶ್ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಕೊಳಗಟ್ಟ ನಾಗರಾಜ್, ಯಜಮಾನರಾದ ಮುತ್ತು, ಚಿಕ್ಕ ಯಜಮಾನ ಕಾಂತರಾಜು, ಕೆ.ಬಿ.ರಾಜು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವಯ್ಯ, ವಾಸು, ರಾಮಯ್ಯ, ರಾಜು, ಚಿಕ್ಕನಂಜಯ್ಯ, ಗೌರಮ್ಮ, ಪುಷ್ಪಾ, ಸವಿತಾ, ಸುಂದರ್ ರಾಜು, ಕುಮಾರ, ಸಿಂಗಯ್ಯ, ಸಿದ್ದು ಇತರರು ಇದ್ದರು.