ಚಿಕ್ಕಹಳ್ಳಿ ಬಳಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆ 
ಮೈಸೂರು

ಪಾಲಿಕೆ ವ್ಯಾಪ್ತಿಗೆ ವರುಣ ಹೋಬಳಿ ಸೇರಿಸಲು ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ವರುಣ ಹೋಬಳಿ ಭಾಗದ ಮುಖಂಡರ ಸಭೆ
  • ವರುಣ ಗ್ರಾಮಗಳು ಪಾಲಿಕೆಗೆ ಸೇರಲು ಇರುವ ಮಾನದಂಡಗಳ ಪ್ರಕಾರ ಅರ್ಹತೆ ಇದ್ದರೂ ಸೇರಿಸದೆ ಇರುವುದಕ್ಕೆ ಕಾರಣಗಳೇನು?
ಮೈಸೂರು: ಬೃಹತ್ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ವರುಣ ಹೋಬಳಿ ಭಾಗದ ಪ್ರದೇಶಗಳನ್ನು ಕೈ ಬಿಟ್ಟಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ಮೈಸೂರು ತಾಲೂಕಿನ ಚಿಕ್ಕಹಳ್ಳಿ ಬಳಿ ಇರುವ ಮೈಸೂರು ಇಂಜಿನಿಯರಿಂಗ್ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವರುಣ ಹೋಬಳಿ ಭಾಗದ ಮುಖಂಡರ ಸಭೆ ಶನಿವಾರ ಸಂಜೆ ನಡೆಯಿತು.
ವರುಣ ವಿಧಾನಸಭಾ ಕ್ಷೇತ್ರದ ಮುಖಂಡ ಶರತ್ ಪುಟ್ಟಬುದ್ಧಿ ಮಾತನಾಡಿ, ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಕುರಿತು ಅಧಿಸೂಚನೆ ಹೊರಡಿಸಲಾಗಿದೆ. 
ಇದರಲ್ಲಿ ವರುಣ ಹೋಬಳಿಯ ಪ್ರಮುಖ ಗ್ರಾಮಗಳು, ಮುಡಾ, ಖಾಸಗಿ ಸಂಸ್ಥೆಗಳು ಅಭಿವೃದ್ಧಿ ಪಡಿಸಿರುವ ಬಡಾವಣೆಗಳನ್ನು ಕೈಬಿಡಲಾಗಿದೆ. ಇದೊಂದು ಅವೈಜ್ಞಾನಿಕ ನಿರ್ಧಾರ. ಸರ್ಕಾರವು ಇದನ್ನು ಕೂಡಲೇ ಸರಿಪಡಿಸಿ ಈ ಭಾಗದ ಪ್ರದೇಶಗಳನ್ನು ಬೃಹತ್ ಮೈಸೂರು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಪಶ್ಚಿಮ ದಿಕ್ಕಿನಲ್ಲಿ ಸುಮಾರು 20-25 ಕಿ.ಮೀ. ದೂರ ಇರುವ ಇಲವಾಲ, ನಾಗವಾಲ, ಬೀರಿಹುಂಡಿ ಪಂಚಾಯಿತಿಗಳ ವ್ಯಾಪ್ತಿಗೆ ಬರುವಂತ ಗ್ರಾಮಗಳನ್ನು ಸೇರಿಸಲಾಗಿದೆ. ಆದರೆ, ಪೂರ್ವ ದಿಕ್ಕಿನಲ್ಲಿ,  ಅದರಲ್ಲೂ ಮುಖ್ಯಮಂತ್ರಿ ಸ್ವಕ್ಷೇತ್ರ ವರುಣ ವಿಧಾನಸಭಾ ವ್ಯಾಪ್ತಿಗೆ ಬರುವ ಮೊಸನಬಾಯನಹಳ್ಳಿ, ವರುಣ, ವಾಜಮಂಗಲ, ದೇವಲಾಪುರ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಗ್ರಾಮಗಳು, ಮುಡಾ, ಖಾಸಗಿಯವರು ಅಭಿವೃದ್ಧಿಪಡಿಸಿರುವ ಲೇಔಟ್‌ಗಳು ಮೈಸೂರಿಗೆ ಕೇವಲ 2-3 ಕಿ.ಮೀ. ಹತ್ತಿರದಲಿದ್ದರೂ, ಸೇರಿಸಿಲ್ಲ. 
ಈ ಗ್ರಾಮಗಳು ಪಾಲಿಕೆಗೆ ಸೇರಲು ಇರುವ ಮಾನದಂಡಗಳ ಪ್ರಕಾರ ಅರ್ಹತೆ ಇದ್ದರೂ ಸೇರಿಸದೆ ಇರುವುದಕ್ಕೆ ಕಾರಣಗಳೇನು? ಇದು ಅವೈಜ್ಞಾನಿಕ ನಿರ್ಧಾರವಲ್ಲವೇ ಎಂದು ಪ್ರಶ್ನಿಸಿದರು. 
ನೂರಾರು ಗ್ರಾಮಸ್ಥರು ಮತ್ತು ಲೇಔಟ್ ನಿವಾಸಿಗಳು ಸೇರಿದ್ದ ಸಭೆಯಲ್ಲಿ ಹಲವರು ಮಾತನಾಡಿ ಸಲಹೆ ನೀಡಿದರು.
ಬಳಿಕ ವರುಣ ಹೋಬಳಿ ಪ್ರದೇಶಗಳನ್ನು ಪಾಲಿಕೆಗೆ ಸೇರಿಸಬೇಕು. ಇದರ ಸಲುವಾಗಿ ಹೋರಾಡಲು ಬೃಹತ್ ಮೈಸೂರು ಮಹಾನಗರ ಪಾಲಿಕೆ ಹೋರಾಟ ಸಮಿತಿ ರಚಿಸಲು ನಿರ್ಧರಿಸಲಾಯಿತು. 
ಇದರ ಭಾಗವಾಗಿ ಸರ್ಕಾರದ ಅಧಿಸೂಚನೆಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಫೆಬ್ರವರಿ 7ರ ಒಳಗಾಗಿ ಪೌರಾಡಳಿತ ನಿರ್ದೇಶಕರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು. ಹಾಗೆ ಜನಪ್ರತಿನಿಧಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. 
ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ಧಿ, ಮೈಸೆಂ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ಶಿವಪ್ಪ, ಟ್ರಸ್ಟಿ ಕಿಶೋರ್ ಬಿದ್ದಪ್ಪ, ಮಾಜಿ ಮೇಯರ್ ದಕ್ಷಿಣಾಮೂರ್ತಿ, ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸಿಇಒ ಶಿವಕುಮಾರ್, ಚಿಕ್ಕಹಳ್ಳಿ ಕೃಷ್ಣಮೂರ್ತಿ, ಮಾದಪ್ಪ, ಪ್ರವೀಣ್, ಸಿದ್ಧಾರ್ಥ, ಶಿವಸ್ವಾಮಿ, ಲೋಹಿತ್, ವಾಸುದೇವನ್, ಜಯರಾಮ್ ಮುಖಂಡರು, ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಲೇಔಟ್ ನಿವಾಸಿಗಳು ಪಾಲ್ಗೊಂಡಿದ್ದರು.