ಮೈಸೂರು ನಗರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಬಜೆಟ್‌ನಲ್ಲಿ ಕನಿಷ್ಠ 500 ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನಿಯೋಗವು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ಮನವಿ ಸಲ್ಲಿಸಿತು. ಎಂ.ಲಕ್ಷ್ಮಣ್, ಅಯೂಬ್ ಖಾನ್, ಎಂ.ಕೆ.ಸೋಮಶೇಖರ್, ಡಾ.ಬಿ.ಜೆ.ವಿಜಯಕುಮಾರ್, ಆರ್.ಮೂರ್ತಿ ಇನ್ನಿತರರಿದ್ದರು. 
ಮೈಸೂರು

ಮೈಸೂರಿನ ಟ್ರಾಫಿಕ್, ಕಾನೂನು ಸುವ್ಯವಸ್ಥೆ ಸರಿಪಡಿಸಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಬಜೆಟ್‌ನಲ್ಲಿ 500 ಕೋಟಿ ರೂ. ನೀಡಲು ಒತ್ತಾಯ
  • ಮುಖ್ಯಮಂತ್ರಿಗೆ ಕಾಂಗ್ರೆಸ್ ನಿಯೋಗ ಮನವಿ
  • ಟ್ರಾಫಿಕ್ ಸಮಸ್ಯೆ ತಗ್ಗಿಸಲು ರಿಂಗ್ ರಸ್ತೆ ಹೊರಗಡೆ ಕನಿಷ್ಠ 4 ಸ್ಯಾಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡಿ
ಮೈಸೂರು: ಮೈಸೂರು ನಗರ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಲು, ಕಾನೂನು ಸುವ್ಯವಸ್ಥೆ ಸರಿಪಡಿಸಲು ರಾಜ್ಯ ಬಜೆಟ್‌ನಲ್ಲಿ ಕನಿಷ್ಠ 500 ಕೋಟಿ ರೂ. ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನಿಯೋಗವು, ನಗರ ಪೊಲೀಸ್ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಬೃಹತ್ ಮಹಾನಗರ ಪಾಲಿಕೆ ಬದಲಾವಣೆಯಿಂದ ವ್ಯಾಪ್ತಿ 86 ಚದರ ಕಿ.ಮೀ.ನಿಂದ 341 ಚದರ ಕಿ.ಮೀ.ಗೆ ಹೆಚ್ಚಾಗಲಿದೆ. ಇದಕ್ಕೆ ಅನುಗುಣವಾಗಿ ಈಗಿರುವ 16 ಪೊಲೀಸ್ ಠಾಣೆಯೊಂದಿಗೆ ಹೊಸದಾಗಿ 6 ಠಾಣೆ ನಿರ್ಮಿಸಬೇಕು. ಕನಿಷ್ಠ 4 ಡಿಸಿಪಿ ಹುದ್ದೆ ಸೃಷ್ಟಿಸಬೇಕು. ಪೊಲೀಸರಿಗೆ ಸುಸಜ್ಜಿತ ದ್ವಿಚಕ್ರ, ನಾಲ್ಕು ಚಕ್ರ ವಾಹನ ನೀಡಬೇಕು. ನಗರ ಪ್ರವಾಸಿ ತಾಣದಲ್ಲಿ ಬಾಂಬ್ ನಿಷ್ಕ್ರಿಯ ದಳ ರಚನೆ, ಇತರ ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.
ನಗರದಲ್ಲಿ ಅಂದಾಜು 8 ಲಕ್ಷ ವಾಹನ, ಬೇರೆ ಕಡೆಗಳಿಂದ ನಿತ್ಯ ಬರುವ 1 ಲಕ್ಷ ವಾಹನಗಳಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆ ತಗ್ಗಿಸಲು ರಿಂಗ್ ರಸ್ತೆ ಹೊರಗಡೆ ಕನಿಷ್ಠ 4 ಸ್ಯಾಟ್‌ಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು, ಖಾಸಗಿ ಬಸ್ ನಿಲ್ದಾಣವನ್ನು ತಿ.ನರಸೀಪುರ ರಸ್ತೆಗೆ ಹೋಗುವ ಕಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಯಿತು.
ಮೆಟ್ರೋಪೋಲ್ ವೃತ್ತದಿಂದ ಹಿನಕಲ್ ವೃತ್ತ, ಮೆಟ್ರೋಪೋಲ್ ವೃತ್ತದಿಂದ ಜೆಎಲ್‌ಬಿ ರಸ್ತೆ ಮೂಲಕ ಫ್ಲೈಒವರ್, ಅಂಡರ್‌ಪಾಸ್ ನಿರ್ಮಿಸಲು ಮುಂದಾಗಬೇಕು. ಕನಿಷ್ಠ 6 ಕಡೆ ಮಲ್ಟಿ ಲೆವಲ್ ಪಾರ್ಕಿಂಗ್ ಕಟ್ಟಡ ನಿರ್ಮಿಸಬೇಕು. ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕು. ನಗರದ ಹೊರಗಡೆ ವಸ್ತುಪ್ರದರ್ಶನ ಮೈದಾನ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಲಾಯಿತು.
ಬಹುತೇಕ ವೃತ್ತಗಳಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು. ಪಾದಚಾರಿಗಳು ರಿಂಗ್‌ರಸ್ತೆ ದಾಟಲು ಅಂಡರ್ ಪಾಸ್, ಸ್ಕೈ ವಾಕ್ ನಿರ್ಮಿಸಬೇಕು. ಪೆರಿಫೆರಲ್ ರಿಂಗ್‌ರೋಡ್, ಔಟರ್‌ರಿಂಗ್ ರೋಡ್ ನಿರ್ಮಿಸಬೇಕು. ಹಾಲಿ ಇರುವ ರಿಂಗ್ ರಸ್ತೆಯನ್ನು 6 ಪ್ಲಸ್ 6 ಪಥ ರಸ್ತೆಯಾಗಿ ವಿಸ್ತರಿಸಬೇಕು ಎಂದು ಒತ್ತಾಯಿಸಲಾಯಿತು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಶಿವಣ್ಣ ಇನ್ನಿತರರಿದ್ದರು.