ನಗರದ ಅಲ್ ಬದರ್ ಸರ್ಕಲ್ ಬಳಿ ಕರ್ನಾಟಕ ಕ್ರಾಂತಿ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.
ಶಾಸಕ ತನ್ವೀರ್‌ಸೇಠ್‌ಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಕರ್ನಾಟಕ ಕ್ರಾಂತಿ ಸೇನೆ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಲ್ ಬದರ್ ಸರ್ಕಲ್ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಕಳೆದ ಮೂರ್ನಾಲ್ಕು ದಶಕಗಳಿಂದ ನಿಷ್ಠಾವಂತರಾಗಿ ದುಡಿದ ತನ್ವೀರ್‌ಸೇಠ್ ಅವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಮೈಸೂರು ಪ್ರಾಂತ್ಯಕ್ಕೆ ಮುಸ್ಲಿಂ ಸಮುದಾಯದ ಒಬ್ಬ ಪ್ರಶ್ನಾತೀತ ನಾಯಕರಾಗಿದ್ದ ತನ್ವೀರ್ ಅವರಿಗೆ ಸಚಿವ ಸ್ಥಾನ ಕೊಡದೆ ಕಡೆಗಣಿಸಿರುವುದು ಖಂಡನೀಯ. ಮೊದಲ ಅವಧಿಯಲ್ಲೇ ಅವರಿಗೆ ಸಚಿವ ಸ್ಥಾನ ಕೈ ತಪ್ಪಿತ್ತು. ಈಗಲಾದರೂ ಸಿಕ್ಕೇ ಸಿಗುವ ಅಛಲ ವಿಶ್ವಾಸ ಇಟ್ಟುಕೊಂಡಿದ್ದರು. ಅವರ ಆತ್ಮವಿಶ್ವಾಸಕ್ಕೆ ಕಾಂಗ್ರೆಸ್ ಹೈಕಮಾಂಡ್, ನಾಯಕರು ತಣ್ಣೀರೆರಚಿದ್ದಾರೆ. ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಅವರ ಹೆಸರನ್ನು ತೆಗೆದು ಹಾಕಿರುವುದು ಅವರ ಬೆಂಬಲಿಗರಿಗೆ ಮತ್ತು ಎನ್‌ಆರ್ ಕ್ಷೇತ್ರದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕಿಡಿಕಾರಿದರು.
ಎನ್‌ಆರ್ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಾರ್ಯಕರ್ತರೂ ಬಹಳ ನೊಂದುಕೊಂಡು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ತಮ್ಮ ನಿರ್ಧಾರ ಬದಲಾಯಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.