ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಅವರಿಗೆ ಸತ್ಯ ಎಂಎಎಸ್ ಫೌಂಡೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು. ಸತ್ಯಪ್ಪ, ಪುರುಷೋತ್ತಮರಾವ್ ಸಾಳುಂಕೆ, ರವಿಕುಮಾರ್ ಇತರರಿದ್ದರು. 
ಮೈಸೂರು

ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹ

ಹುಣಸೂರು: ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆ(ಲಿಫ್ಟ್ ಇರಿಗೇಷನ್)ಯಡಿ ಗಾವಡಗೆರೆ ಹೋಬಳಿ ವ್ಯಾಪ್ತಿಯ 20 ಕೆರೆಗಳು ಹಾಗೂ ಕೆ.ಆರ್ ನಗರ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ಸತ್ಯ ಎಎಂಎಸ್ ಫೌಂಡೇಷನ್ ವತಿಯಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಶುಕ್ರವಾರ ನಗರದ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ಕೆ.ಆರ್.ನಗರ-ಹುಣಸೂರು ತಾಲೂಕಿನ ಗಡಿಭಾಗವಾಗಿದ್ದು, ಗಾವಡಗೆರೆ ವ್ಯಾಪ್ತಿಯಲ್ಲಿ ಅತೀ ಕಡಿಮೆ ಮಳೆ ಬೀಳುವ (ಅರೆ ಮಲೆನಾಡು) ಪ್ರದೇಶವಾಗಿದೆ. ಈ ಭಾಗದ ಕೆರೆಗಳಾದ ಗಾವಡಗೆರೆ ಕೆರೆ,ಮಾವಿನಕೆರೆ, ಚೇಣಿಕೆರೆ, ಅತ್ತಿಕಟ್ಟೆ, ನಿಂಗೇಗೌಡನಕಟ್ಟೆ, ಶಿವನಕೆರೆ, ಮಾಚಬಾಯನಹಳ್ಳಿ ಕೆರೆ, ಗಂಗೋಜಿ ಕೆರೆ, ಕಾಳದ್ದನಕಟ್ಟೆ, ಮನುಗನಹಳ್ಳಿ ಕಟ್ಟೆ, ಸುಬ್ಬಪ್ಪನಕಟ್ಟೆ, ಗಾವಡಗೆರೆ ದೊಡ್ಡಕೆರೆ, ಗಾವಡಗೆರೆ ಚಿಕ್ಕೆರೆ, ಕಳ್ಳಿಕೊಪ್ಪಲು ಕೆರೆ, ಮುದ್ದೇಗೌಡನಕಟ್ಟೆ, ಜಾಬಗೆರೆ ಕೆರೆ, ಕಳ್ಳಿಕೊಪ್ಪಲು ಊರಮುಂದಿನಕೆರೆ, ಚಿಕ್ಕಾಡಿಗನಹಳ್ಳಿ ಕೆರೆ, ಕೆರೆಯೂರು ಕೆರೆ, ಹುಲ್ಯಾಳು ಕೆರೆ, ಮಾಚಬಾಯನಹಳ್ಳಿ ಕೆರೆ, ಮೈಲಾಂಬೂರು ಕೆರೆ, ಬಿಳಿಗೆರೆ ಕೆರೆ, ಮಾರಗೌಡನಹಳ್ಳಿ ಕೆರೆಗಳಿಗೆ ಹಾರಂಗಿ ಬಲದಂಡೆ ನಾಲೆಯಿಂದ ವರ್ಷಕ್ಕೆ ಒಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತದೆ ಎಂದರು.
ಅಂತೆಯೇ ಪಕ್ಕದ ಕೆ.ಆರ್.ನಗರ ತಾಲೂಕಿನ ಸುಮಾರು 16 ಕೆರೆಗಳಾದ ಚನ್ನಪ್ಪನಕೊಪ್ಪಲು ಕೆರೆ, ಆರೇಕಲ್ ಕೊಪ್ಪಲು ಕೆರೆ, ಆರೆಕಲ್ ಹೊಸಕೊಪ್ಪಲು ಕೆರೆ, ದೊಡ್ಡಾಡಿಗನಹಳ್ಳಿ ಕೆರೆ, ಕಾಳೇನಹಳ್ಳಿ ಕೆರೆ, ಮಾರಿಗೌಡನಕೊಪ್ಪಲು ಕೆರೆ, ದುಪ್ಪದಕಟ್ಟೆ, ಹಬ್ಬನಕಟ್ಟೆ, ಮಾರಗೌಡನಹಳ್ಳಿ ಕೆರೆ, ಮಾವತ್ತೂರು ಕೆರೆ, ಮಳಲಿ ಕೆರೆ, ಬ್ಯಾಡರನಹಳ್ಳಿ ಕಟ್ಟೆ, ಬ್ಯಾಡರಹಳ್ಳಿ ಕೆರೆ, ಸಿದ್ದಮ್ಮನ ಕೊಪ್ಪಲುಕೆರೆ, ಡಿ.ಕೆ. ಕೊಪ್ಪಲು ಕೆರೆ, ಸಿದ್ಧಾಪುರ ಕೆರೆ ಹಾಗೂ ಇತರೆ ಕೆರೆಗಳಿದ್ದು ಇವುಗಳಿಗೆ ಹಾರಂಗಿ ಬಲದಂಡೆ ನಾಲೆಯಿಂದ ನೀರು ಪೂರೈಕೆಯಾಗುತ್ತಿದೆ. ಎರಡೂ ತಾಲೂಕಿನ ಗಡಿಭಾಗದಲ್ಲಿ 60 ಸಾವಿರಕ್ಕೂ ಕೊಳವೆ ಬಾವಿಗಳಿವೆ. ಸಾವಿರಾರು ಎಕರೆ ಕೃಷಿಯೋಗ್ಯ ಭೂಮಿಯಿದೆ. ವರ್ಷಕ್ಕೆ ಒಂದು ಬಾರಿ ನೀರು ಸಿಗುವುದರಿಂದ ಈ ಭಾಗದ ರೈತರು ಕೇವಲ ಒಂದು ಬೆಳೆಗೆ ಸಮಾಧಾನಪಟ್ಟುಕೊಳ್ಳುವ ಪರಿಸ್ಥಿತಿ ಇದೆ. ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕೆಆರ್.ನಗರ ತಾಲೂಕಿನ ಅರ್ಕೇಶ್ವರಸ್ವಾಮಿ ದೇವಾಲಯ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿಗೆ ಏತ ನೀರಾವರಿ ಯೋಜನೆ ಅಳವಡಿಸಿ ಈ ಎಲ್ಲ 36 ಕೆರೆಗಳನ್ನು ತುಂಬಿಸುವ ಕಾರ್ಯ ಅತ್ಯಗತ್ಯವಾಗಿ ಆಗಬೇಕಿದೆ. ನೀರಾವರಿ ಸಚಿವರು ಈ ಭಾಗದ ಜನರ ಬವಣೆ ಅರಿತು ಗಾವಡಗೆರೆ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವ ಮೂಲಕ ರೈತರ ಬವಣೆ ನೀಗಿಸಬೇಕೆಂದು ಆಗ್ರಹಿಸಿದರು.
ರೈತ ಮುಖಂಡರಾದ ಪುರುಷೋತ್ತಮ್‌ರಾವ್ ಸಾಳುಂಕೆ, ರವಿಕುಮರ್, ವೆಂಕಟೇಶ್ ಇತರರು ಹಾಜರಿದ್ದರು.