ರೈಲ್ವೆ ಇಲಾಖೆ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುವಂತೆ ಆಗ್ರಹಿಸಿ ಕರ್ನಾಟಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವಿನಯ್‌ಕುಮಾರ್, ನಜರ್‌ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆಯ ಎಸ್.ಎನ್.ರಾಜೇಶ್, ಲೋಕೇಶ್ ಇತರರು ಇದ್ದರು.
- ಕನ್ನಡಿಗರನ್ನು ಮುಂಬಡ್ತಿಯಿಂದ ವಂಚಿಸಲಾಗುತ್ತಿದೆ
- ಕನ್ನಡಿಗರನ್ನು ಅವಮಾನ ಮಾಡುವುದು ತಪ್ಪಿಲ್ಲ
ಮೈಸೂರು:ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಸಿಬ್ಬಂದಿಗೆ ರೈಲ್ವೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಬೇಕು ಎಂದು ಕರ್ನಾಟಕ ಹಿತರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಅವರಿಗೆ ಮನವಿ ಸಲ್ಲಿಸಿ, ರೈಲ್ವೆ ಇಲಾಖೆಯ ಗ್ರೂಪ್ ‘ಸಿ’ ಹಾಗೂ ‘ಡಿ’ ಪರೀಕ್ಷೆಗಳನ್ನು ಪ್ರಥಮ ಹಂತದಲ್ಲಿ ಕನ್ನಡದಲ್ಲಿಯೇ ನಡೆಸಲಾಗುತ್ತದೆ. ಆಯ್ಕೆಯಾದ ನಂತರ ಮುಂಬಡ್ತಿಗೆ ಸಂಬಂಧಿಸಿದ ಇಲಾಖೆವಾರು ಆಂತರಿಕ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನಡೆಸುವ ಮೂಲಕ ಕನ್ನಡಿಗರನ್ನು ಮುಂಬಡ್ತಿಯಿಂದ ವಂಚಿಸಲಾಗುತ್ತಿದೆ ಎಂದು ದೂರಿದರು.
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಅಧಿಕಾರಿಗಳು ರಾಜ್ಯದ ಸಿಬ್ಬಂದಿಗೆ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ರೈಲ್ವೆ ಇಲಾಖೆಯು ಉದ್ಯೋಗ ವಿಚಾರವಾಗಿ ಮೊದಲಿನಿಂದಲೂ ಕನ್ನಡಿಗರನ್ನು ವಂಚಿಸುತ್ತಾ ಬಂದಿದೆ. ನೇಮಕಾತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸುವ ಮೂಲಕ ಉನ್ನತ ಹುದ್ದೆಗಳನ್ನು ಕನ್ನಡಿಗರಿಗೆ ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕನ್ನಡಿಗರನ್ನು ಅವಮಾನ ಮಾಡುವುದು ತಪ್ಪಿಲ್ಲ, ನಮ್ಮ ಮಾತೃಭಾಷೆಯಲ್ಲಿ ರೈಲ್ವೆ ನೇಮಕಾತಿ ಪರೀಕ್ಷೆ ಬರೆಯುವ ಹಕ್ಕನ್ನು ಕೇಂದ್ರ ಸರ್ಕಾರವೇ ಕಿತ್ತುಕೊಳ್ಳುತ್ತಿದೆ. ಕನ್ನಡಿಗರಾದ ವಿ.ಸೋಮಣ್ಣ ಅವರೇ ರೈಲ್ವೆ ಖಾತೆ ರಾಜ್ಯ ಸಚಿವರಾದರೂ ಈ ಅನ್ಯಾಯ ತಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆಯ ಎಸ್.ಎನ್.ರಾಜೇಶ್, ಲೋಕೇಶ್, ಈಶ್ವರ್, ರವಿಚಂದ್ರ, ಯತೀಂದ್ರ, ರಾಕೇಶ್, ಅಮಿತ್ ಇತರರು ಇದ್ದರು.