ದಸರಾದಲ್ಲಿ ಕಂಬಳ ಆಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ನಿಯೋಗವು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು. ದರ್ಶನ್ ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಚಾಮರಸ ಪಾಟೀಲ, ಪ್ರೊ.ಕಾಳಚನ್ನೇಗೌಡ, ಹೊಸೂರು ಕುಮಾರ್, ಪರಶುರಾಮೇಗೌಡ ಇದ್ದರು. 
ಮೈಸೂರು

ದಸರಾದಲ್ಲಿ ಕಂಬಳ ಆಯೋಜನೆ ಕೈಬಿಡಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಸಿದ್ದರಾಮಯ್ಯಗೆ ವಿವಿಧ ಸಂಘಟನೆಗಳ ನಿಯೋಗ ಮನವಿ
  • ವಿರೋಧದ ನಡುವೆಯೂ ಕಂಬಳ ಆಯೋಜಿಸಲು ತಯಾರಿ
  • ಕಂಬಳ ಕ್ರೀಡೆ ಆಯೋಜಿಸುವುದನ್ನು ಕೈಬಿಡಲು ಸಿಎಂಗೆ ಸೂಕ್ತ ಸಲಹೆ ನೀಡಿ

ಮೈಸೂರು: 

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ನಿಯೋಗವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಕಾವೇರಿ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ‘ಪರಿಸರಕ್ಕಾಗಿ ನಾವು’ ಸಂಘಟನೆ, ಭೂಮಿ ತಾಯಿ ಹೋರಾಟ ಸಮಿತಿ, ಕನ್ನಡಪರ, ಪ್ರಗತಿಪರ ಸಂಘಟನೆಗಳು, ಇನ್ನಿತರ ಸಂಘ ಸಂಸ್ಥೆಗಳ ಮುಖಂಡರನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರ ವಿರೋಧದ ನಡುವೆಯೂ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಸದ್ದಿಲ್ಲದೆ ತಯಾರಿ ನಡೆದಿದೆ. ಕರಾವಳಿಯ ಕ್ರೀಡೆಯನ್ನು ಮೈಸೂರು ನಗರದಲ್ಲಿ ಆಯೋಜಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ಜಿಲ್ಲಾಡಳಿತ ಇದನ್ನು ಆಯೋಜನೆಗೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಮಿತಿಯನ್ನೂ ರಚಿಸಲಾಗಿದೆ. ಮತ್ತೊಂದೆಡೆ, ಕಂಬಳ ಆಯೋಜನೆಗೆ ಉದ್ದೇಶಿಸಿರುವ ಸಾತಗಳ್ಳಿಯ ಸ್ಥಳದಲ್ಲಿ ಮರ ಗಿಡಗಳನ್ನು ತೆರವು ಮಾಡಿ ಸ್ಥಳವನ್ನು ಹದ ಮಾಡಲಾಗುತ್ತಿದೆ ಎಂದು ನಿಯೋಗದ ಸದಸ್ಯರು ಸಿದ್ದರಾಮಯ್ಯ ಅವರಿಗೆ ತಿಳಿಸಿದರು.
ಅಪಾರ ಸಂಖ್ಯೆಯ ಜನರು ಸೇರುವ ಕಂಬಳ ಆಯೋಜನೆ ಮೈಸೂರಿನ ಲಕ್ಷಾಂತರ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ಮೂಡಿಸಲು ಕಾರಣವಾಗುತ್ತದೆ. ಕಂಬಳ ಕ್ರೀಡೆ ಕರಾವಳಿ ಪ್ರದೇಶದ (ತುಳುನಾಡಿನ) ಜನಪ್ರಿಯ ಗ್ರಾಮೀಣ ಕ್ರೀಡೆ. ಇದು ಕರಾವಳಿಯ ಪ್ರಾದೇಶಿಕ ಸೊಗಡು, ಸಾಂಸ್ಕೃತಿಕ ವೈಶಿಷ್ಟ್ಯ, ಧಾರ್ಮಿಕ ಆಚರಣೆ ಒಳಗೊಂಡಿದೆ. ಇಂತಹ ಕಂಬಳವನ್ನು ಕರಾವಳಿ ಪ್ರದೇಶದಿಂದ ಮೈಸೂರಿನ ದಸರಾ ಸಂದರ್ಭದಲ್ಲಿ ತಂದು ಹೇರುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ. ಇದನ್ನು ಮೈಸೂರಿನ ಜನರು ವಿರೋಧಿಸುವಂತೆ ಕರಾವಳಿ ಭಾಗದ ಜನರೂ ವಿರೋಧಿಸುತ್ತಿದ್ದಾರೆ ಎಂದು ತಿಳಿಸಲಾಯಿತು.
ಎಲ್‌ನಿನೊ ಕಾರಣದಿಂದ ಈ ವರ್ಷ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿ ಬರಗಾಲ ಆವರಿಸಿದೆ. ಕೆಲವು ಜಿಲ್ಲೆಗಳಲ್ಲಿ ರೈತರು ಬಿತ್ತನೆಯನ್ನೇ ಸರಿಯಾಗಿ ಮಾಡಲಾಗಲಿಲ್ಲ. ಬಿತ್ತನೆ ಮಾಡಿರುವ ಕಡೆ ಬೆಳೆ ಒಣಗಿ ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕಾವೇರಿ ಜಲ ವಿವಾದ ಉಲ್ಬಣಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ  ಮಳೆ ಬಾರದಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸರ್ಕಾರದ ಆದ್ಯತೆಯಾಗಬೇಕು. ಅನ್ನದಾತ ತೀವ್ರ ಸಂಕಷ್ಟದಲ್ಲಿರುವಾಗ ಅನಗತ್ಯ ಖರ್ಚು ಮಾಡಿ ಕಂಬಳ ಆಯೋಜನೆ ಮಾಡುವುದು ಸಂವೇದನಾರಹಿತ ನಡೆಯಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಂಖಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಕೇವಲ ಎರಡು ದಿನಗಳ ಕ್ರೀಡೆಗೆ 400 ಕೋಣ, ಪ್ರತಿ ಕೋಣದ ಜವಾಬ್ದಾರಿಗೆ 50 ಜನರಂತೆ 20 ಸಾವಿರ ಜನರನ್ನು ದೂರದ ಊರುಗಳಿಂದ ಮೈಸೂರಿಗೆ ಕರೆತರುವುದು, ಕೆಸರು ಗದ್ದೆ ನಿರ್ಮಾಣಕ್ಕೆ 25.28 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿ ಕಡಿಯುವುದು. ಈ ಜಾಗದಲ್ಲಿದ್ದ ಸಾತಗಳ್ಳಿ ಕೆರೆಯನ್ನು ಮುಚ್ಚುವುದು, ನೀರಿನ ತೀವ್ರ ಅಭಾವವಿರುವಾಗ ಲಕ್ಷಾಂತರ ಲೀಟರ್ ನೀರು ಪೋಲು ಮಾಡುವುದು ವಿವೇಕದ ನಡೆಯಲ್ಲ. ಆದ್ದರಿಂದ ಕಂಬಳ ಕ್ರೀಡೆ ಆಯೋಜಿಸುವುದನ್ನು ಕೈಬಿಡಲು ಸಿಎಂಗೆ ಸೂಕ್ತ ಸಲಹೆ ನೀಡಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ  ಮುಖಂಡರಾದ ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಪ್ರೊ.ಕಾಳಚನ್ನೇಗೌಡ, ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪರಿಸರ ಬಳಗದ ಕಾರ್ಯದರ್ಶಿ ಪರಶುರಾಮೇಗೌಡ ಇದ್ದರು.