ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಣಸೂರು ನಗರದಲ್ಲಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಜೆ.ಮಂಜುನಾಥ್‌ರಿಗೆ ಮನವಿ ಸಲ್ಲಿಸಿತು. ನಿಂಗರಾಜ ಮಲ್ಲಾಡಿ, ಹೊಸೂರು ಕುಮಾರ್, ನಂಜಪ್ಪ ಬಸವನಗುಡಿ, ಬಲ್ಲೇನಹಳ್ಳಿ ಕೆಂಪರಾಜು ಇತರರಿದ್ದರು. 
ಮೈಸೂರು

ನಿವೇಶನ ಹಂಚಿಕೆ, ಸ್ಮಶಾನ ನಿರ್ಮಾಣಕ್ಕೆ ಒತ್ತಾಯ

ಎಂ.ರವಿ

ದಸಂಸದಿಂದ ಹುಣಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ

ಹುಣಸೂರು: ವಸತಿ ಸೌಕರ್ಯ, ನಿವೇಶನ ಹಂಚಿಕೆ, ಸ್ಮಶಾನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡಸಿದರು.
ನಗರದ ಸಂವಿಧಾನ ವೃತ್ತದಿಂದ ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ನೂರಾರು ಸದಸ್ಯರು ತಾಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕ ನಿಂಗರಾಜ ಮಲ್ಲಾಡಿ, ಹುಣಸೂರು ನಗರದಲ್ಲಿ 870 ನಿವೇಶನಗಳು ಬಡವರಿಗೆ ಹಂಚಿಕೆ ಮಾಡಲು ಸಿದ್ಧವಿದ್ದರೂ ನಗರಸಭೆ ವಿತರಿಸುತ್ತಿಲ್ಲ. ತಾಲೂಕಿನ ಚಿಕ್ಕಾಡಿಗನಹಳ್ಳಿ, ಮಾಚಬಾಯನಹಳ್ಳಿ, ಹುಲ್ಯಾಳು, ಯಶೋಧರಪುರ, ದೊಡ್ಡಹೆಜ್ಜೂರು, ಅಂಬೇಡ್ಕರ್‌ನಗರ, ಕೆಬ್ಬೇಕೊಪ್ಪಲು ಮುಂತಾದ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ದಲಿತರು, ಅಲೆಮಾರಿ ಸಮುದಾಯಗಳು ಪರದಾಡುವ ಸ್ಥಿತಿಯಿದೆ ಬೇಸರಿಸಿದರು.
ಬಲ್ಲೇನಹಳ್ಳಿ ಕೆಂಪರಾಜು ಮಾತನಾಡಿ, ಕೆಬ್ಬೇಕೊಪ್ಪಲು ದೊಂಬರ ಕಾಲನಿ, ಅಂಬೇಡ್ಕರ್‌ನಗರ, ಮಂಗಳೂರು ಮಾಳ, ಬಿ.ಆರ್. ಕಾವಲ್ ಮುಂತಾದ ಗ್ರಾಮಗಳಲ್ಲಿ ನಿರ್ಗತಿಕ ಅಲೆಮಾರಿ ಕುಟುಂಬಗಳು ವಾಸಿಸಲು ಮನೆ ಮತ್ತು ಇತರ ಮೂಲ ಸೌಕರ್ಯಗಳಿಲ್ಲದೆ ಸಂಕಷ್ಟದ ಬದುಕನ್ನು ದೂಡುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಮತ್ತು ಗಿರಿಜನ ಕಲ್ಯಾಣ ಇಲಾಖೆಗಳು ಈ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ ಮಾತನಾಡಿ, ಹಬ್ಬನಕುಪ್ಪೆ ಗ್ರಾಮದಲ್ಲಿ 40 ಪರಿಶಿಷ್ಟ ಮಾದಿಗ ಕುಟುಂಬಗಳು ವಾಸ ಮಾಡುತ್ತಿದ್ದು, ಈ ಕುಟುಂಬಗಳಿಗೆ ನಮ್ಮ ಮನೆ ನಮ್ಮ ತೋಟ ಯೋಜನೆಯಡಿ ಜಾಗ ಮಂಜೂರಾಗಿದ್ದರೂ ಹಕ್ಕುಪತ್ರ ಕೊಟ್ಟಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಹುಣಸೂರು ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ದಸಂಸ ಪ್ರತಿಭಟನೆ ಮೂಲಕ ಕೊಟ್ಟಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ಮಾಡಿ ಕಾಲಮಿತಿಯಲ್ಲಿ ಕಾನೂನಿನ ರೀತಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ದಸಂಸ ರಾಜ್ಯ ಸಂಚಾಲಕ ತರಿಕೆರೆ ವೆಂಕಟೇಶ್, ಸಂಘಟನಾ ಸಂಚಾಲಕ ನಂಜಪ್ಪ ಬಸವನಗುಡಿ, ವಿಭಾಗೀಯ ಸಂಚಾಲಕ ಸಿ.ಎಸ್. ಜಗದೀಶ್ ಚಾಮರಾಯನಕೋಟೆ, ಜಿಲ್ಲಾ ಸಂಚಾಲಕ ಎಚ್.ಬಿ.ದಿವಾಕರ್, ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಮುಖಂಡರಾದ ಕಿರಿಜಾಜಿ ಗಜೇಂದ್ರ, ದೇವೇಂದ್ರ ಕುಳುವಾಡಿ, ಮಲ್ಲಿಕ್ ಪಾಷ, ಲತೇಶ, ಶಶಿಕುಮಾರ್, ಅಂಬೇಡ್ಕರ್ ನಗರದ ಶೇಖರ, ಹರೀಶ, ಕೆಬ್ಬೇಕೊಪ್ಪಲು ದೊಂಬರ ಕಾಲನಿಯ ಶಿವರಾಜ, ಶಿವು, ರಾಜು, ಸೋಮಣ್ಣ, ಕಟ್ಟೆಮಳಲವಾಡಿಯ ಜೆ. ಮಹದೇವ, ಮಾಚಬಾಯನಹಳ್ಳಿ ಹರೀಶ, ಪುಟ್ಟಮ್ಮ, ಬಿಳಿಗೆರೆ ಗ್ರಾಮದ ಯಜಮಾನ್ ಸಣ್ಣಯ್ಯ ಇತರರು ಇದ್ದರು.