ಹುಣಸೂರು ಉಪವಿಭಾಗ ವ್ಯಾಪ್ತಿಯ ಎಚ್.ಡಿ.ಕೋಟೆಯ ಪ್ರಭಾನಗರದಲ್ಲಿ ಜೇನುಕುರುಬ ಸಮುದಾಯದ ಸಭೆ ಆಯೋಜಿಸಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ರವಿ, ರಾಜಣ್ಣ, ಡಾ.ಎಸ್.ಶ್ರೀಕಾಂತ್, ಮಹದೇವಮ್ಮ, ರಾಜಮ್ಮ ಇತರರಿದ್ದಾರೆ. 
ಮೈಸೂರು

ಜೇನುಕುರುಬ ಕಚೇರಿ ಮರುಸ್ಥಾಪನೆಗೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • Jenukuruba
ಹುಣಸೂರು: ಈ ನೆಲ ಮೂಲ ನಿವಾಸಿಗಳಾದ ಜೇನುಕುರುಬ ಸಮುದಾಯದ ಗಿರಿಜನರ ಸಮಸ್ಯೆಗಳನ್ನು ಅರಿತು ಪರಿಹರಿಸಲು ಅನುಕೂಲವಾಗುವಂತೆ ಈ ಹಿಂದೆ ಇದ್ದಂತೆ ತಾಲೂಕು ಮಟ್ಟದಲ್ಲಿ ಜೇನುಕುರುಬ ಕಚೇರಿಗಳನ್ನು ಮರುಸ್ಥಾಪಿಸಬೇಕೆಂದು ಜೇನುಕುರುಬ ಮೂಲನಿವಾಸಿಗಳ ಪ್ರಮುಖರು ಆಗ್ರಹಿಸಿದ್ದಾರೆ.
ಹುಣಸೂರು ಉಪವಿಭಾಗ ವ್ಯಾಪ್ತಿಯ ಹುಣಸೂರು, ಎಚ್.ಡಿ.ಕೋಟೆ ತಾಲೂಕುಗಳ ಜೇನುಕುರುಬ ಸಮುದಾಯದ ಪ್ರಮುಖರು ಎಚ್.ಡಿ.ಕೋಟೆ ತಾಲೂಕಿನ ಪ್ರಭಾನಗರದಲ್ಲಿ ಶುಕ್ರವಾರ ಸಭೆ ಸೇರಿ ಚರ್ಚಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ರವಿ, ಹಾಡಿ ಅರಣ್ಯ ಹಕ್ಕು ಸಮಿತಿಗಳಿಂದ ವೈಯಕ್ತಿಕ ಅರಣ್ಯ ಭೂಮಿ ಹಕ್ಕು, ಸಾಮೂಹಿಕ ಅರಣ್ಯ ಹಕ್ಕು, ಕಾಡಿನ ಕಿರು ದಿನಸಿ ಹಕ್ಕು ಹಾಗೂ ಕಾಡಿನ ನೆಲಸುಗಳ ಮೇಲಿನ ಹಕ್ಕು ಮಾನ್ಯ ಮಾಡುವ ಕುರಿತಾಗಿ ಎಸ್‌ಡಿಎಲ್‌ಸಿ ಅಥವಾ ಡಿಎಲ್‌ಸಿ ಸಮಿತಿಗಳು ನ್ಯಾಯಬದ್ಧ ತೀರ್ಮಾನ ತೆಗೆದುಕೊಳ್ಳದ ಕಾರಣ ಹಕ್ಕು ಮಾನ್ಯ ಮಾಡುವಲ್ಲಿ ಅನ್ಯಾಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಒಂದೇ ದಿನ ಎಸ್‌ಡಿಎಲ್‌ಸಿ ಅಧ್ಯಕ್ಷರು ಎಸಿ ಯವರು 1300 ಪ್ರಸ್ತಾವನೆ ತಿರಸ್ಕರಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ತಿರಸ್ಕರಿದ ಈ ಎಲ್ಲ ಪ್ರಸ್ತಾವನೆಗಳನ್ನು ಮರು ಪರಿಶೀಲನೆ ಮಾಡಬೇಕಿತ್ತು, ಆದರೆ ಈವರೆಗೆ ಮಾಡಿಲ್ಲ. ಅರಣ್ಯ ನೆಲಸುಗಳ ಮೇಲಿನ ಜೇನುಕುರುಬ ಮೂಲ ನಿವಾಸಿಗಳ ಹಕ್ಕನ್ನು ಮಾನ್ಯ ಮಾಡುವ ಪ್ರಕ್ರಿಯೆಗೆ ಸರಿಯಾಗಿ ಚಾಲನೆಯನ್ನೇ ನೀಡಿಲ್ಲ ಎಂದು ದೂರಿದರು.
ಮುಖಂಡ ಭೀಮನಹಳ್ಳಿ ರಾಜಣ್ಣ ಮಾತನಾಡಿ, ಕಾಡಲ್ಲಿನ ಜೇನುಕುರುಬರ ಶ್ರದ್ಧಾ ಕೇಂದ್ರಗಳಿಗೆ, ಸ್ಮಶಾನಗಳಿಗೆ, ಗಿಡಮೂಲಿಕೆ ಔಷಧ, ಕಿರುದಿನಿಸಿ ಸಂಗ್ರಹಕ್ಕೆ ಮಂಟಳ್ಳಿ ಕಾಡು, ಚಾಮಳ್ಳಿ ಕಾಡು, ಚೌಡಮ್ಮ ಕಾಡು, ಮೇಟಿಕುಪ್ಪೆ ಕಾಡುಗಳಿಗೆ ಅರಣ್ಯ ಇಲಾಖೆ ರಕ್ಷಣೆ ಪಡೆದೇ ಹೋಗಬೇಕಿದೆ. ಅಲ್ಲದೆ ಮೊದಲೇ ವನ್ಯಜೀವಿ ಹೆಸರಲ್ಲಿ ಕಾಡಿನಿಂದ ಹೊರಹಾಕಿರುವ ಕುಟುಂಬಗಳನ್ನು ಹೈಕೋರ್ಟ್ ಆದೇಶದಂತೆ ಪುನರ್ವಸತಿ ಕಾರ್ಯವನ್ನು ಕೂಡಲೇ ಸರ್ಕಾರ ಕೈಗೊಳ್ಳಬೇಕು. ಜೇನುಕುರುಬರೇ ಹೆಚ್ಚು ಹೊರ ಹಾಕಲ್ಪಟ್ಟಿರುವುದರಿಂದ ಪಿವಿಟಿಜಿ(ವಿಶೇಷ ದುರ್ಬಲ ಬುಡಕಟ್ಟು ಗುಂಪು)ಯೋಜನೆಗೆ ಒಳಪಡಿಸಿ ಕೂಡಲೇ ಪುನರ್ವಸತಿ ಕೈಗೊಳ್ಳುವತ್ತ ಸರ್ಕಾರ ಮುಂದಡಿಯಿಡಬೇಕು ಎಂದು ಒತ್ತಾಯಿಸಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಹಾಡಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸುವುದು, ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡುವುದು, ಭೂಮಿಯ ಅನುಭೋಗದಲ್ಲಿರುವ ಕುಟುಂಬಗಳ ಹೆಸರಿಗೆ ಭೂಮಿ ಹಕ್ಕು ಪತ್ರ ನೀಡುವುದು, ಸಾಗುವಳಿ ಸಿಕ್ಕಿರುವ ಭೂಮಿಗೆ ಪೋಡು ಮಾಡಿಸುವುದು, ಮುಖ್ಯವಾಗಿ ಮೂಲನಿವಾಸಿ ಜೇನುಕುರುಬರಿಗೆ ಒಳಮೀಸಲು ಘೋಷಿಸಬೇಕು. ಜೇನುಕುರುಬ ಸಮುದಾಯ ಎದುರಿಸುತ್ತಿರುವ ಈ ಎಲ್ಲ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯವಾಗಿ ಈ ಹಿಂದೆ ತಾಲೂಕು ಮಟ್ಟದಲ್ಲಿ ಇದ್ದ ಜೇನುಕುರುಬ ಕಚೇರಿಗಳನ್ನು ಮರುಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಬಸವರಾಜನಕಟ್ಟೆಯ ಜೆ.ಟಿ. ರಾಜಪ್ಪ ಅರಣ್ಯ ಹಕ್ಕು ಕಾಯ್ದೆ, ಪೆಸಾ ಕಾಯ್ದೆ, ಹೈ ಕೋರ್ಟ್ ಆದೇಶದ ಮಹತ್ವ ಕುರಿತು ಮಾತನಾಡಿದರು. ಮುಖಂಡರಾದ ಕೂಸಪ್ಪ, ಸಣ್ಣಪ್ಪ, ರಾಜಮ್ಮ, ಮಹದೇವಮ್ಮ,ಸ್ವಾಮಿ, ಚಂದ್ರ, ಕುಮಾರ್ ಸೇರಿದಂತೆ 15ಕ್ಕೂ ಹೆಚ್ಚು ಹಾಡಿಯ ಮುಖಂಡರು ಪಾಲ್ಗೊಂಡಿದ್ದರು.