ಹುಣಸೂರು ನಗರದ ತಾಲೂಕು ಕಚೇರಿ ಮುಂಭಾಗ ರೈತಸಂಘದ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಎಸಿ ಕಚೇರಿಯ ತಹಸೀಲ್ದಾರ್ ಯದುಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಮೋದೂರು ಮಹೇಶ್, ಕೃಷ್ಣೇಗೌಡ, ಚಂದ್ರಪ್ಪ, ಶಿವನಂಜಪ್ಪ, ರಾಮೇಗೌಡ ಇತರರಿದ್ದರು.
- ರೈತಸಂಘ ಮತ್ತು ಹಸಿರುಸೇನೆ ಸದಸ್ಯರು ಪ್ರತಿಭಟನೆ
ಹುಣಸೂರು : ಗೋಮಾಳ ಜಮೀನಿನಲ್ಲಿ ತಲೆಮಾರುಗಳಿಂದ ಬೇಸಾಯ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು, ತಂಬಾಕಿಗೆ ಉತ್ತಮ ದರ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಮತ್ತು ಹಸಿರುಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದ ರೈತರು ಗೋಮಾಳ ಭೂಮಿ ರೈತರಿಗೆ ಸಿಗಲಿ, ತಂಬಾಕಿಗೆ ನ್ಯಾಯಯುತ ದರ ನೀಡಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಗಮನಸೆಳೆದರು.
ರೈತಸಂಘದ ತಾಲೂಕು ಅಧ್ಯಕ್ಷ ಮೋದೂರು ಎಂ.ಎಚ್.ಮಹೇಶ್ ಮಾತನಾಡಿ, ರೈತರು ತಲೆತಲಾಂತರಗಳಿಂದ ಗೋಮಾಳ ಭೂಮಿಯಲ್ಲಿ ಕೃಷಿ ಕೈಗೊಂಡು ಜೀವನ ನಡೆಸಿದ್ದು, ಅಂದಿನ ಕಾಲದಲ್ಲಿ ನಮ್ಮ ಪೂರ್ವಜರಿಗೆ ಇದು ಗೋಮಾಳ ಅಥವಾ ಕೃಷಿ ಜಮೀನು ಎನ್ನುವುದು ತಿಳಿದಿರಲಿಲ್ಲ. ಇದೀಗ ಸರ್ಕಾರಗಳು ಗೋಮಾಳದಲ್ಲಿ ಬೇಸಾಯ ಮಾಡುವವರಿಗೆ ಸಾಗುವಳಿ ಪತ್ರ ನೀಡಲಾಗದು ಎಂದು ತೀರ್ಮಾನಿಸಿರುವುದು ರಾಜ್ಯಾದ್ಯಂತ ಕೋಟ್ಯಂತರ ರೈತಕುಟುಂಬಗಳನ್ನು ಅತಂತ್ರ ಸ್ಥಿತಿಗೆ ತಂದಿದೆ. ಸರ್ಕಾರಗಳು ನಮೂನೆ 53ರಲ್ಲಿ ಅರ್ಜಿ ಸ್ವೀಕರಿಸಿದ್ದು ಗೋಮಾಳದಲ್ಲಿ ಕೃಷಿ ನಡೆಸಿರುವ ರೈತರಿಗೂ ಸಾಗುವಳಿ ಪತ್ರ ನೀಡುವ ಮೂಲಕ ಅವರ ಆರ್ಥಿಕಾಭಿವೃದ್ಧಿಗೆ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಅನಧಿಕೃತ ತಂಬಾಕು ಬೆಳೆಗಾರರಿಗೆ ಯಾವುದೇ ದಂಡಶುಲ್ಕವನ್ನು ತಂಬಾಕು ಮಂಡಳಿ ವಿಧಿಸಬಾರದು. ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲಿ ಕೆ.ಜಿ.ಗೆ 400 ರೂ.ಗಳನ್ನು ನೀಡಿರುವಾಗ ಕರ್ನಾಟಕದಲ್ಲಿ ಮಾತ್ರ ರೂ.320 ರ ಗಡಿ ದಾಟದಿರುವುದು ಏಕೆ? ತಂಬಾಕು ಮಂಡಳಿ ಮತ್ತು ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿರುವುದು ಖಂಡನೀಯ. ಯಾವುದೇ ಬೇಲ್‌ಗಳ ಮೇಲೆ ಸಿಆರ್ ದಾಖಲು ಮಾಡುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.
ಪ್ರತಿಭಟನಾಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ರೈತರಿಂದ ಮನವಿಪತ್ರ ಸ್ವೀಕರಿಸಿದರು. ಶಿರಸ್ತೇದಾರ್ ಶ್ರೀಪಾದ್ ನಲವತ್‌ವಾಡಕರ್ ಇದ್ದರು. ಪ್ರತಿಭಟನೆಯಲ್ಲಿ ಪಿರಿಯಾಪಟ್ಟಣ ರೈತಸಂಘದ ತಾಲೂಕು ಅಧ್ಯಕ್ಷ ಅಜಿತ್, ಮುಖಂಡರಾದ ಶೇಖರ್, ರಾಮೇಗೌಡ, ಸತ್ಯಪ್ಪ, ಶಿವನಂಜಪ್ಪ, ಚಂದ್ರಪ್ಪ ಇತರರು ಭಾಗವಹಿಸಿದ್ದರು.