ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರನ್ನು ಅಮಾನಿಸಿರುವ ಕಿಡಿಗೇಡಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಆರ್.ರಾಜು, ಮನೋಜ್‌ಕುಮಾರ್, ಮರಿಸ್ವಾಮಿ, ಎಸ್.ಕೆ.ಶಿವಕುಮಾರ್, ಪರಶುರಾಮ್, ಪ್ರಭಾಕರ್ ಇದ್ದರು.
ತಿ.ನರಸೀಪುರದಲ್ಲಿ ದಸಂಸ ಕಾರ್ಯಕರ್ತರಿಂದ ಪ್ರತಿಭಟನೆ
ತಿ.ನರಸೀಪುರ: ಸಾಮಾಜಿಕ ಜಾಲತಾಣಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಸೇರಿದಂತೆ ಗೌತಮ ಬುದ್ಧ ಹಾಗೂ ಬಸವಣ್ಣ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ ಅವಮಾನಿಸಿರುವ ಕಿಡಿಗೇಡಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಆತನನ್ನು ದೇಶದಿಂದಲೇ ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಮಾರ್ಗ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗದ ಉದ್ಯಾನದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಮಹನಿಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೆ.ಆರ್.ಪೇಟೆ ತಾಲೂಕಿನ ದೊಡ್ಡಯಾಚೇನಹಳ್ಳಿಯ ವೇದಮೂರ್ತಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ದಸಂಸ ಜಿಲ್ಲಾ ಸಂಚಾಲಕ ಕೆಂಪಯ್ಯನಹುಂಡಿ ಆರ್.ರಾಜು ಮಾತನಾಡಿ, ದೇಶದ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳು ದೊರೆತಿವೆ. ಇಂತಹ ಸಂವಿಧಾನವನ್ನು ರೂಪಿಸುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಸಂವಿಧಾನ ಶಿಲ್ಪಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅವರು ಶ್ರಮಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಕುರಿತು ಅವಹೇಳನಕಾರಿ ಹೇಳಿಕೆ ನೀದಿರುವ ವೇದಮೂರ್ತಿ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಆತನನ್ನು ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ದಸಂಸ ತಾಲೂಕು ಸಂಚಾಲಕ ನೆರಗ್ಯಾತನಹಳ್ಳಿ ಮನೋಜ್‌ಕುಮಾರ್ ಮಾತನಾಡಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸದಸ್ಯ ಕನ್ನನಾಯಕನಹಳ್ಳಿ ಮರಿಸ್ವಾಮಿ, ಪದಾಧಿಕಾರಿಗಳಾದ ಸೋಸಲೆ ಶಿವಕುಮಾರ್, ಕೊಳತ್ತೂರು ಪ್ರಭಾಕರ್, ಹಳೇ ಕೆಂಪಯ್ಯನಹುಂಡಿ ಜಯಣ್ಣ, ಹೆಮ್ಮಿಗೆ ಮಲ್ಲೇಶ್, ಮಾರನಪುರ ಶಿವಮೂರ್ತಿ, ಚೌಹಳ್ಳಿ ಪರಶುರಾಮ್, ಯಡಡೋರೆ ಕೃಷ್ಣ, ಬೈರಾಪುರ ಅರ್ಜುನ, ಮಾರನಪುರ ಕೇಶವಮೂರ್ತಿ, ರಾಜೇಂದ್ರ, ಬೆನಕನಹಳ್ಳಿ ಕಾರ್ ಸ್ವಾಮಿ, ಕುಪ್ಯಾ ಗವಿಸಿದ್ದಯ್ಯ, ದೊಡ್ಡಬಾಗಿಲು ಪ್ರೇಮ್‌ಕುಮಾರ್, ಯಡಡೋರೆ ಶ್ರೇಯಸ್, ಕುರುಬೂರು ಶಿವರಾಜ್, ಉಕ್ಕಲಗೆರೆ ಮಹದೇವಸ್ವಾಮಿ, ನಾಗರಾಜು ಸೇರಿದಂತೆ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.