ಸರಗೂರು ಪಟ್ಟಣದ ಅರಣ್ಯ ಇಲಾಖೆ ಮುಂಭಾಗ ರೈತರು, ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಹುಲಿ ದಾಳಿಗೆ ಬಲಿಯಾದ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಸಮಾವೇಶಗೊಂಡ ರೈತರು, ಸಂಘದ ಕಾರ್ಯಕರ್ತರು ಸರ್ಕಾರ, ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾಲೂಕಿನ ಹಳೆಹೆಗ್ಗುಡಿಲು, ಕೋತ್ತೇಗಾಲ, ಜಯನಗರ, ಹಲಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಹುಲಿ, ಆನೆ ಸೇರಿದಂತೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ರೈತರು ಜಮೀನಿಗೆ ತೆರಳಲು ಆತಂಕಪಡುವಂತಾಗಿದೆ. ಕಾಡು ಪ್ರಾಣಿಗಳು ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಾನುವಾರುಗಳ ಮೇಲೂ ಹುಲಿ ದಾಳಿ ನಡೆಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಆರೋಪಿಸಿದರು.
ಸೋಮವಾರ ಜಯನಗರ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿರುವುದು ರೈತರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆ ನಷ್ಟಕ್ಕೆ ವೈಜ್ಞಾನಿಕ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಹುಲಿ ಸಂಚಾರವಿರುವ ಪ್ರದೇಶಗಳಲ್ಲಿ ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಿ ನಿಗಾವಹಿಸಬೇಕು. ಕಾಡಂಚಿನ ಗ್ರಾಮಗಳ ಜನರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಬೇಕು ಎಂದು ಪಟ್ಟುಹಿಡಿದರು.
ಅರಣ್ಯ ಇಲಾಖೆ ಡಿಸಿಎಫ್ ಪರಮೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿ ಮಾತನಾಡಿ, ಹುಲಿ ದಾಳಿ ನಡೆದಿರುವ ಸ್ಥಳದಲ್ಲಿ ಅಗತ್ಯ ಪರಿಶೀಲನೆ ನಡೆಸಲಾಗುವುದು. ಚಲನವಲನದ ಬಗ್ಗೆ ನಿಗಾವಹಿಸಲಾಗಿದ್ದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಜಾನುವಾರು ಕಳೆದುಕೊಂಡ ರೈತರಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಬೆಳೆ ನಷ್ಟ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ, ಎಸಿಎಫ್ ಎಸ್.ಸುಮಿತ್ರಾ, ಆರ್‌ಎಫ್‌ಒ ಲೋಕೇಶ್, ಡಿಆರ್‌ಎಫ್‌ಒ ಪ್ರದೀಪ್, ಸಂಘದ ಪದಾಧಿಕಾರಿಗಳು, ಸುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.