ಮಾನವ-ಆನೆ ಸಂಘರ್ಷ ತಡೆಗೆ ಅಗತ್ಯ ಕ್ರಮಕ್ಕೆ ಆಗ್ರಹಿಸಿ ಸಂಸದ ಯದುವೀರ್ ಅವರು ನಗರದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದರು.
- ಅರಣ್ಯ ಸಚಿವ ರಾಮಲಿಂಗಾರೆಡ್ಡಿಗೆ ಸಂಸದ ಯದುವೀರ್ ಮನವಿ ಸಲ್ಲಿಕೆ
ಮೈಸೂರು: ಮಾನವ-ಆನೆ ಸಂಘರ್ಷ ಹಾಗೂ ಡಾ.ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಮನವಿಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಲ್ಲಿಸಿದರು.
ಕೊಡಗಿನಲ್ಲಿ ಹೆಚ್ಚುತ್ತಿರುವ ಮಾನವ-ಆನೆ ಸಂಘರ್ಷ ಸಮಸ್ಯೆಯನ್ನು ತಾತ್ಕಾಲಿಕ ಕ್ರಮಗಳಿಂದ ಪರಿಹರಿಸಲು ಸಾಧ್ಯವಿಲ್ಲ. ಮಾನವ ಜೀವಗಳು, ಕೃಷಿ ಹಾಗೂ ಜನರ ಜೀವನೋಪಾಯ ರಕ್ಷಿಸಲು ವೈಜ್ಞಾನಿಕ, ಸಮಗ್ರ ಮತ್ತು ದೀರ್ಘಕಾಲೀನ ಕಾರ್ಯತಂತ್ರದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಅಪಾಯದ ಅರಣ್ಯ ಗಡಿ ಪ್ರದೇಶಗಳಲ್ಲಿ ರಕ್ಷಣಾತ್ಮಕ ಮೂಲಸೌಕರ್ಯ ಬಲಪಡಿಸುವುದು, ಆನೆಗಳ ಚಲನವಲನ ವೈಜ್ಞಾನಿಕವಾಗಿ ಹಾಗೂ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುವುದು, ಪರಿಣಾಮಕಾರಿ ಮುನ್ನೆಚ್ಚರಿಕೆ ವ್ಯವಸ್ಥೆ ಸ್ಥಾಪಿಸುವುದು, ತ್ವರಿತ ಪ್ರತಿಕ್ರಿಯ ವ್ಯವಸ್ಥೆ ಬಲಪಡಿಸುವುದು ಹಾಗೂ ಅರಣ್ಯ ಪ್ರದೇಶಗಳಲ್ಲಿಯೇ ಸಾಕಷ್ಟು ಮೇವು ಮತ್ತು ನೀರಿನ ಲಭ್ಯತೆ ಖಚಿತಪಡಿಸುವ ಮೂಲಕ ಆನೆಗಳು ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ಕಡಿಮೆ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಮಾನವವನ್ಯಜೀವಿ ಸಂಘರ್ಷವನ್ನು ವಿಪತ್ತು ನಿರ್ವಹಣೆ ಸವಾಲಿನಷ್ಟೇ ಗಂಭೀರವಾಗಿ ಪರಿಗಣಿಸಿ, ತಡೆಗಟ್ಟುವ ಕ್ರಮಗಳು, ಸೌಕರ್ಯ ಅಭಿವೃದ್ಧಿ ಹಾಗೂ ಸಕಾಲಿಕ ಪರಿಹಾರಕ್ಕಾಗಿ ಲಭ್ಯವಿರುವ ರಾಜ್ಯ ಮತ್ತು ರಾಷ್ಟ್ರೀಯ ಸಂಪನ್ಮೂಲ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ.ಕಸ್ತೂರಿರಂಗನ್ ವರದಿ ಕುರಿತು ಉಲ್ಲೇಖಿಸಿರುವ ಸಂಸದರು, ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಮಹತ್ವದ್ದಾಗಿದ್ದು, ಹಲವು ತಲೆಮಾರುಗಳಿಂದ ಈ ಪ್ರದೇಶಗಳಲ್ಲಿ ವಾಸಿಸುತ್ತಾ, ಪರಿಸರ ಸಂರಕ್ಷಿಸಿಕೊಂಡು ಬಂದಿರುವ ಜನರ ಹಕ್ಕುಗಳು, ಜೀವನೋಪಾಯ ಮತ್ತು ಭವಿಷ್ಯವನ್ನೂ ರಕ್ಷಿಸಬೇಕು ಎಂದು ಸ್ಪಷ್ಟಪಡಿಸಿದರು.
ಕೇವಲ ಉಪಗ್ರಹ ಚಿತ್ರಗಳನ್ನೇ ಆಧರಿಸದೆ ಸ್ಥಳೀಯಮಟ್ಟದಲ್ಲಿ ಭೌತಿಕ ಪರಿಶೀಲನೆ ನಡೆಸುವುದು, ವಸತಿ ಪ್ರದೇಶಗಳು ಹಾಗೂ ಕೃಷಿ ಭೂಮಿಯನ್ನು ನಿಖರವಾಗಿ ಗುರುತಿಸುವುದು, ಕಾನೂನುಬದ್ಧ ಕೃಷಿ ಮತ್ತು ಅಗತ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಸ್ಥಳೀಯ ಸಮುದಾಯಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸುವ ಯಾವುದೇ ಪ್ರಸ್ತಾವನೆಯು ಕೊಡಗಿನ ನೈಜ ಪರಿಸ್ಥಿತಿ ಮತ್ತು ಜನರ ನೆಲಮಟ್ಟದ ಕಳಕಳಿ ಪ್ರತಿಬಿಂಬಿಸುವಂತಿರಬೇಕು ಎಂದು ಮನವಿ ಮಾಡಿದರು.