- ಮೂರೂವರೆ ವರ್ಷ ಕಳೆದರೂ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ
- ನ್ಯಾಯಾಲಯ ಆದೇಶ ಇದ್ದರೂ ಅವಧಿಯೊಳಗೆ ನೀಡದೆ ವಿಳಂಬ ಅಗುತ್ತಿದೆ
ಮೈಸೂರು:ಮೈಸೂರು ಅಭಿವೃದ್ಧಿ ಪ್ರಾಧಿಕಾರ ಸಾಧಕರಿಗೆ ‘ಎಚ್’ ಕ್ಯಾಟಗರಿಯಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯ, ದೇಶಕ್ಕೆ ಕೀರ್ತಿ ತಂದವರಿಗೆ ನಿವೇಶನ ನೀಡುವುದಾಗಿ ಈ ಹಿಂದಿನ ಮುಡಾ 2023ರ ಫೆಬ್ರವರಿಯಲ್ಲಿ ಅರ್ಜಿ ಆಹ್ವಾನಿಸಿತ್ತು. ಅರ್ಜಿದಾರರಿಂದ ನಿವೇಶನ ಮೌಲ್ಯದ ಶೇ.10 ಮುಂಗಡ ಹಣವನ್ನೂ ಪಡೆದುಕೊಂಡಿದ್ದರು. ಆದರೆ ಮೂರೂವರೆ ವರ್ಷ ಕಳೆದರೂ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ನಿವೇಶನ ಮಂಜೂರು ಮಾಡದ ಕುರಿತು ನಿಂಗರಾಜು, ಎಂ.ಪಿ.ಅಜಿತ್, ಡಾ.ವರ್ಷ ಪುರಾಣಿಕ್ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಆರು ತಿಂಗಳೊಳಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಮಾ.5ರಂದು ಆದೇಶ ನೀಡಿದೆ. ಆದರೆ ತೀರ್ಪು ಹೊರಬಿದ್ದು ನಾಲ್ಕು ತಿಂಗಳು ಕಳೆದರೂ ಪ್ರಕ್ರಿಯೆ ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು.
ನಗರದ ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಹಂಚಿಕೆಯಾಗದೆ ಉಳಿದ ಇನ್ನೂ 361 ನಿವೇಶನಗಳು ಖಾಲಿ ಇದ್ದರೂ, ಕೇವಲ 180 ಸಾಧಕರಿಗೆ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದರು.
2002-03ರಲ್ಲಿ ನಿರ್ಮಾಣಗೊಂಡ ಈ ಬಡಾವಣೆಯಲ್ಲಿ 23 ವರ್ಷಗಳಾದರೂ ಅನೇಕ ನಿವೇಶನಗಳು ಹಂಚಿಕೆಯಾಗದೆ ಉಳಿದಿವೆ. ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಅಕ್ರಮವಾಗಿ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿರುವಾಗ, ಕಾನೂನುಬದ್ಧವಾಗಿ ಅರ್ಹತೆ ಹೊಂದಿರುವ ಸಾಧಕರು, ನಿವೃತ್ತ ಸೈನಿಕರು, ಯೋಗಪಟುಗಳು, ಕ್ರೀಡಾಪಟುಗಳು, ವೈದ್ಯಕೀಯ, ಕಲೆ ಮತ್ತು ಸಾಹಿತ್ಯ ಕ್ಷೇತ್ರದ ಸಾಧಕರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.
ನಗರಾಭಿವೃದ್ಧಿ ಇಲಾಖೆ ಸಚಿವ ಯತೀಂದ್ರ ಅವರು ಮುಡಾಕ್ಕೆ ಭೇಟಿ ನೀಡಿ, ಹೈಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳನ್ನು ಪ್ರಶ್ನಿಸಿ, ಅರ್ಹ ಸಾಧಕರಿಗೆ ತಕ್ಷಣ ನಿವೇಶನ ಹಂಚಿಕೆ ಮಾಡುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಮುಡಾ ಬದಲಿ ನಿವೇಶನ ಹಂಚಿಕೆ ಕುರಿತ ತಮ್ಮ ಹೋರಾಟ ಮುಂದುವರಿಯಲಿದ್ದು, ‘ಬಿ’ ವರದಿ ಸಲ್ಲಿಕೆ ಸಂಬಂಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದೇನೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಕಾನೂನು ಹೋರಾಟ ಮುಂದುವರಿಯಲಿದೆ ಎಂದರು.
ಮಾಜಿ ಸೈನಿಕ ಹಾಗೂ ಶೌರ್ಯ ಪ್ರಶಸ್ತಿ ಪುರಸ್ಕೃತ ಬಿ.ಆರ್.ನಿಂಗರಾಜು ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ದೇಶಕ್ಕಾಗಿ ಹೋರಾಡಿದ ಸೈನಿಕನಾದ ನನಗೂ ಮೂರೂವರೆ ವರ್ಷಗಳಿಂದ ನಿವೇಶನ ಸಿಕ್ಕಿಲ್ಲ. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಮುಡಾ ಅಧ್ಯಕ್ಷರು ಹಾಗೂ ಆಯುಕ್ತರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.