: ಹುಣಸೂರಿನ ಉಪ್ಕಾರ್ ಲೇಔಟ್‌ನಲ್ಲಿ ಬೀದಿ ನಾಯಿಗಳ ದಾಳಿಗೆ ಜಿಂಕೆ ಮರಿ ಮೃತಪಟ್ಟಿರುವುದು. 
ಮೈಸೂರು

ಬೀದಿ ನಾಯಿಗಳ ದಾಳಿಗೆ ಜಿಂಕೆ ಮರಿ ಬಲಿ

ಎ. ಆರ್. ರಘುರಾಮ
ಹುಣಸೂರು : ದಾರಿ ತಪ್ಪಿ ನಗರದೊಳಗೆ ಪ್ರವೇಶಿಸಿದ್ದ ಜಿಂಕೆ ಮರಿಯನ್ನು ಬೀದಿ ನಾಯಿಗಳ ಹಿಂಡು ಕೊಂದು ಹಾಕಿವೆ.
ನಗರದ ಮೈಸೂರು ರಸ್ತೆಯಲ್ಲಿರುವ ಉಪ್ಕಾರ್ ಲೇಔಟ್‌ನಲ್ಲಿ ಭಾನುವಾರ ಮಧ್ಯಾಹ್ನ ಆಹಾರ ಅರಸುತ್ತಾ ಬಂದಿದ್ದ ಸುಮಾರು ಒಂದು ವರ್ಷದ ಜಿಂಕೆ ಮರಿಯನ್ನು ಬೀದಿ ನಾಯಿಗಳ ಹಿಂಡು ಲೇಔಟ್‌ನಲ್ಲಿ ಅಟ್ಟಾಡಿಸಿ ಕುತ್ತಿಗೆ ಭಾಗಕ್ಕೆ ಕಚ್ಚಿ ಕೊಂದು ಹಾಕಿದವು. ಇದನ್ನು ಗಮನಿಸಿದ ಬಡಾವಣೆ ನಿವಾಸಿ ಶಿವಣ್ಣ ಎಂಬುವವರು ನಾಯಿಗಳನ್ನು ಓಡಿಸಿ ನಿತ್ರಾಣಗೊಂಡು ಬಿದ್ದಿದ್ದ ಜಿಂಕೆ ಮರಿಗೆ ನೀರು ಕುಡಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಡಿಆರ್‌ಎಫ್‌ಒಗಳಾದ ಮಂಜುನಾಥ್, ಮಲ್ಲಿಕಾರ್ಜುನ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಜಿಂಕೆ ಮೃತಪಟ್ಟಿತ್ತು. ಜಿಂಕೆ ಕಳೇಬರವನ್ನು ಕಲ್‌ಬೆಟ್ಟ ಟಿಂಬರ್ ಯಾರ್ಡ್‌ಗೆ ಸಾಗಿಸಲಾಯಿತು. ನಂತರ ಪಶುವೈದ್ಯ ಡಾ.ಆದರ್ಶ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಹೂಳಲಾಯಿತು.