ತನ್ವೀರ್ ಸೇಠ್  
ಮೈಸೂರು

ಸಚಿವ ಸ್ಥಾನ ಸಿಗದೆ ತೀವ್ರ ನಿರಾಸೆಯಾಗಿದೆ: ಶಾಸಕ ತನ್ವೀರ್ ಸೇಠ್ ಬೇಸರ

ಪ್ರಮುಖ ಮುಖ್ಯಾಂಶಗಳು

  • ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ

ಮೈಸೂರು: 

ಈಗಲೂ ಸಚಿವ ಸ್ಥಾನ ಸಿಗದ ಕಾರಣ ನನಗೆ ಬಹಳ ನಿರಾಸೆ ಆಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ, ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಪ್ರಾಂತ್ಯಕ್ಕೆ ಸಿಗಬೇಕಾದ ಸಚಿವ ಸ್ಥಾನ ಸಿಕ್ಕಿಲ್ಲ. ಈ ಭಾಗಕ್ಕೆ ಆಗಿರೋ ದೊಡ್ಡ ಅನ್ಯಾಯವಿದು. ಸಚಿವ ಸಂಪುಟದ ನೂತನ ಸದಸ್ಯರ ಪಟ್ಟಿ ಸಹ ಆಶಾದಾಯಕವಾಗಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ಬಹಿರಂಗವಾಗಿ ನಡೆಸಿದವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದೂ ಕಿಡಿಕಾರಿದರು.
ಈ ಹಿಂದೆ ‘ನಿಮ್ಮ ಜಿಲ್ಲೆಯವರು ಸಿಎಂ(ಸಿದ್ದರಾಮಯ್ಯ). ಹೀಗಾಗಿ ನಿಮಗೆ ಸಚಿವ ಸ್ಥಾನ ಆಗಲ್ಲ’ ಎಂದು ಹೇಳಿದ್ದರು. ಈಗ ಏನೂ ಹೇಳುತ್ತಾರೆ? ಎಂದು ಪ್ರಶ್ನಿಸಿದರು.

ಮಾನದಂಡ ಏನು ? 

ಯಾವ ಮಾನದಂಡ ಆಧಾರದ ಮೇಲೆ ಸಚಿವ ಸಂಪುಟ ರಚನೆ ಆಗಿದೆಯೋ ಗೊತ್ತಿಲ್ಲ. ಆದರೆ, ದಾವಣಗೆರೆ ಉಪಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರಿಗೂ ಸಚಿವ ಸ್ಥಾನ ಇಲ್ಲ. ಅಲ್ಲಿನ ಮಲ್ಲಿಕಾರ್ಜುನರಿಗೂ ಮಂತ್ರಿಸ್ಥಾನ ದೊರೆತಿಲ್ಲ. ಪಕ್ಷಕ್ಕೆ ಸವಾಲು ಹಾಕಿದವರಿಗೆ ಸಚಿವ ಸ್ಥಾನ ಸಿಗುತ್ತಿದೆ. ಪಕ್ಷಕ್ಕೆ ನಿಷ್ಠರಾಗಿದ್ದರಿಗೆ ಇಲ್ಲ ಎಂದು ತನ್ವೀರ್ ಸೇಠ್ ಗುಡುಗಿದರು.
ಸಚಿವ ಸ್ಥಾನ ತಪ್ಪಲು ಅನೇಕ ನಾಯಕರ ಕೈ ಚಳಕ ನಡೆದಿದೆ. ಪಕ್ಷದಿಂದ ಕೈ ತಪ್ಪಿಲ್ಲ. ಆದರೆ, ನಮ್ಮ ನಾಯಕರಿಂದ ನನಗೆ ಅವಕಾಶ ಕೈ ತಪ್ಪಿದೆ. ನಮ್ಮ ಮೇಲೆ ಚಾಡಿ ಹೇಳಲು ಏನೂ ಇಲ್ಲ. ಕೆಲ ನಾಯಕರಿಗೆ ನಾನು ಯಾರ ಮಾತು ಕೇಳಲ್ಲ ಎಂದಿನಿಸಿದೆ. ಅದಕ್ಕೆ ತಪ್ಪಿಸಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ಕೈ ನಡೆದಿದ್ದರೆ ನನಗೆ ಸಚಿವ ಸ್ಥಾನ ಸಿಗುತ್ತಿತ್ತು. ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೂ, ನನಗೂ ಏನೂ ಸಂಬಂಧ ಇಲ್ಲ. ನನಗೂ ಮತ್ತು ಸಿದ್ದರಾಮಯ್ಯ ನಡುವೆ ಕೆಲ ವಿಚಾರದಲ್ಲಿ ವ್ಯತ್ಯಾಸ ಇದೆಯಷ್ಟೇ ಎಂದರು.

ವ್ಯವಸ್ಥಿತ ಗುಂಪುಗಾರಿಕೆ ನಡೆದಿದೆ

ಸಚಿವ ಸ್ಥಾನ ನೀಡುವ ವಿಷಯದಲ್ಲಿ ವ್ಯವಸ್ಥಿತ ಗುಂಪುಗಾರಿಕೆ ನಡೆದಿದೆ. ಯಾರು ತಪ್ಪಿಸಿದರು ಎಂಬುದು ತಿಳಿದಿದೆ. ಪಕ್ಷದ ಹೈಕಮಾಂಡ್‌ನಿಂದ ನನಗೆ ತೊಂದರೆ ಆಗಿಲ್ಲ ಎಂದು ತಿಳಿಸಿದರು. ಮುಸ್ಲಿಂ ಸಮುದಾಯ ನನ್ನ ಕೈಯಲ್ಲಿದೆ ಎಂದು ಕೆಲವರು ಹೇಳಿಕೊಂಡಿದ್ದರೆ, ಇನ್ನೂ ಕೆಲವರು ಧಮ್ಕಿ ಹಾಕಿದ್ದಾರೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದೂ ಹರಿಹಾಯ್ದರು.
ಪಕ್ಷದಿಂದ ಹೊರ ಬನ್ನಿ ಎಂದು ಕಾರ್ಯಕರ್ತರು ಹೇಳಿದರೆ ಹಾಗೇ ಮಾಡುತ್ತೇನೆ. ಒಟ್ಟಿನಲ್ಲಿ ನನ್ನ ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಕಾರ್ಯಕರ್ತರು ಏನೂ ಹೇಳುತ್ತಾರೋ ಅದೇ ರೀತಿ ಮಾಡುತ್ತೇನೆ ಎಂದು ಎಂದು ಹೇಳಿದರು.