ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಕರ್ನಾಟಕ ಪ್ರಾಂತದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಾಗಾರದಲ್ಲಿ ಡಾ. ಆರ್. ಬಾಲಸುಬ್ರಹ್ಮಣ್ಯ, ನಿವೇದಿತಾ ಭಿಡೆ , ಪ್ರೊ.ಶೈಲೇಂದ್ರ ಮೋಹನ್ ಇದ್ದರು.
- ಇತ್ತೀಚಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳನ್ನು ಕೆಲವೇ ವಿಷಯಗಳಿಗೆ ಸೀಮಿತಗೊಳಿಸಲಾಗುತ್ತಿದೆ
- ಈಶಾನ್ಯ ರಾಜ್ಯಗಳಲ್ಲಿ ಕಲೆ, ಸಂಸ್ಕೃತಿ, ನೃತ್ಯದ ಜತೆಗೆ ಅಧ್ಯಯನ ಯೋಗ್ಯ ವಿಷಯಗಳು ಬೇಕಾದಷ್ಟು ಇವೆ
- ಭಾವನಾತ್ಮಕವಾಗಿ ಸಂವಹನ ಬೆಳೆಸುವ ಕೆಲಸವಾಗಬೇಕಾಗಿದೆ
ಮೈಸೂರು: ಈಶಾನ್ಯ ರಾಜ್ಯಗಳೆಂದರೆ ನೃತ್ಯ ಮತ್ತು ಸಂಗೀತವಷ್ಟೇ ಅಲ್ಲ, ಅಲ್ಲಿ ಅನೇಕ ಆಳವಾದ ಅಧ್ಯಯನ ಯೋಗ್ಯ ವಿಚಾರಗಳಿವೆ ಎಂದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ವಿಭಾಗ (ಸಾಮರ್ಥ್ಯ ನಿರ್ಮಾಣ ಆಯೋಗ)ದ ಸದಸ್ಯ ಡಾ. ಆರ್.ಬಾಲಸುಬ್ರಹ್ಮಣ್ಯ ಹೇಳಿದರು.
ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಕರ್ನಾಟಕ ಪ್ರಾಂತದಿಂದ ಹುಣಸೂರು ರಸ್ತೆಯ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದಲ್ಲಿ ಭಾನುವಾರ ಆಯೋಜಿಸಿದ್ದ ‘ಈಶಾನ್ಯ ರಾಜ್ಯಗಳ ಕೂಗು’ ಎಂಬ ವಿಷಯ ಕುರಿತ ಉಪನ್ಯಾಸ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತಕ್ಕೆ ಈಶಾನ್ಯ ರಾಜ್ಯಗಳು ಮುಖವಾಣಿಯಿದ್ದಂತೆ. ಆದರೆ ಇತ್ತೀಚಿನ ದಿನಗಳಲ್ಲಿ ಈಶಾನ್ಯ ರಾಜ್ಯಗಳನ್ನು ಕೆಲವೇ ವಿಷಯಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಆದರೆ ಈಶಾನ್ಯ ರಾಜ್ಯಗಳಲ್ಲಿ ಕಲೆ, ಸಂಸ್ಕೃತಿ, ನೃತ್ಯದ ಜತೆಗೆ ಅಧ್ಯಯನ ಯೋಗ್ಯ ವಿಷಯಗಳು ಬೇಕಾದಷ್ಟು ಇವೆ. ಅವರೊಂದಿಗೆ ಭಾವನಾತ್ಮಕವಾಗಿ ಸಂವಹನ ಬೆಳೆಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ಅಲ್ಲಿನ ಜನ ಸಾಮಾಜಿಕ, ರಾಜಕೀಯ, ತಾಂತ್ರಿಕ ಸಮಸ್ಯೆಗಳ ನಡುವೆ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಈಶಾನ್ಯದ ರಾಜ್ಯಗಳನ್ನು ಪ್ರವಾಸದ ದೃಷ್ಟಿಯಿಂದಷ್ಟೇ ನೋಡದೆ, ಅಲ್ಲಿನ ಜನರನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಪ್ರತಿ ಎರಡು ಕಿ.ಮೀ.ಗೆ ಭಾಷೆ, ಜನಜೀವನ, ಬಣ್ಣಗಳಲ್ಲಿ ಪರಿವರ್ತನೆ ಕಾಣಸಿಗುತ್ತದೆ. 800ರಿಂದ 900 ತಳಿಗಳ ಅಕ್ಕಿಯನ್ನು ಅಲ್ಲಿ ಬಳಸುತ್ತಾರೆ. ಈ ವೈವಿಧ್ಯತೆ ಇತರೆಡೆ ಕಾಣುವುದು ಸಾಧ್ಯವಾಗುವುದಿಲ್ಲ ಎಂದರು.
ಸರ್ಕಾರಗಳು ಈಶಾನ್ಯ ರಾಜ್ಯಕ್ಕೆ ಬಲತುಂಬುವ ಹಾಗೂ ಅಭಿವೃದ್ಧಿ ಕೆಲಸವನ್ನು ಮಾಡಬೇಕಿದೆ. ಆದರೆ ಸಮಾಜವು ಅವರನ್ನು ಭಾವನಾತ್ಮಕವಾಗಿ ಅರ್ಥೈಸಿಕೊಂಡು ಬೆಂಬಲಿಸಿ, ವಿಶಾಲ ಹೃದಯದಿಂದ ಕಾಣಲು ಮುಂದಾಗಬೇಕು ಎಂದರು.
ಸ್ವಾಮಿ ವಿವೇಕಾನಂದರು ತ್ಯಾಗ ಮತ್ತು ಸೇವೆ ನಮ್ಮ ಧ್ಯೇಯವಾಗಬೇಕು. ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ಈಶಾನ್ಯದ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಹೇಳಿದರು.
ವಿವೇಕಾನಂದರು ಅಮೆರಿಕದಲ್ಲಿ ಪರ್ಯಟನೆ ಮಾಡಿದ ಬಳಿಕ ಅಲ್ಲಿ ಸಾಮಾಜಿಕ ಪರಿವರ್ತನೆ ಆರಂಭವಾಯಿತು. ಆದರೆ ಅವರ ಕೊಡುಗೆಗಳನ್ನು ಬಿಚ್ಚಿ ನೋಡುವ ಭಾವನೆ ಇಲ್ಲದಾಗಿದೆ ಎಂದು ಅಮೆರಿಕದ ಲೇಖಕಿಯೊಬ್ಬರು ಬರೆಯುತ್ತಾರೆ. ನಮ್ಮ ದೇಶದಲ್ಲೂ ಅದೇ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದರು ಈರುಳ್ಳಿ ಸಿಪ್ಪೆಯಿದ್ದಂತೆ, ಅವರ ಬಗ್ಗೆ ತಿಳಿಯುತ್ತ ಹೋದಂತೆ ವಿವಿಧ ಮಜಲುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರನ್ನು ಅರ್ಥೈಸಿಕೊಳ್ಳುವ ಪ್ರಯತ್ನವಷ್ಟೇ ಮಾಡಬಹುದು, ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು ಅಸಾಧ್ಯ ಎಂದರು.
ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ನಿವೇದಿತಾ ಭಿಡೆ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಡಿಯೋ ಮೂಲಕ ಸಂದೇಶ ನೀಡಿದರು.
ವಿಜಯ ವಿಠಲ ಶಾಲೆ ವಿದ್ಯಾರ್ಥಿಗಳು ಮೇಘಾಲಯದ ಖಾಸಿ ಭಾಷೆಯ ಹಾಡು ಹಾಡಿದರು. ವಿದ್ಯಾರ್ಥಿನಿಯರು ಈಶಾನ್ಯ ರಾಜ್ಯದ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶಿಸಿದರು.