ಆಡಳಿತ ತರಬೇತಿ ಸಂಸ್ಥೆ(ಎಟಿಐ) 
ಮೈಸೂರು

ವಯೋಮಾನ ಇಳಿಕೆಯಿಂದ ಗುಣಮಟ್ಟ ಕುಸಿತ?

ಪ್ರಮುಖ ಮುಖ್ಯಾಂಶಗಳು

  • ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮಾರ್ಪಾಡು
  • ನುರಿತ ಬೋಧಕರ ಕೊರತೆ
  • ತರಬೇತಿ ಗುಣಮಟ್ಟ ಕುಸಿತಕ್ಕೂ ಕಾರಣ
*ಎಟಿಐನಲ್ಲಿ ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಮಾರ್ಪಾಡು
ವಿಜಯವಾಣಿ ಸುದ್ದಿಜಾಲ ಮೈಸೂರು
ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವಾ ವರ್ಗದ ಅಧಿಕಾರಿಗಳಿಗೆ ತರಬೇತಿ ನೀಡುವ ನಗರದ ಆಡಳಿತ ತರಬೇತಿ ಸಂಸ್ಥೆ(ಎಟಿಐ)ಯಲ್ಲಿ ಗುತ್ತಿಗೆ ಆಧಾರದ ನೇಮಕಾತಿಯ ವಯೋಮಾನ ಇಳಿಕೆಯಿಂದ ನುರಿತ ಬೋಧಕರ ಕೊರತೆಯಾಗಲಿದ್ದು, ಇದುವೇ ತರಬೇತಿ ಗುಣಮಟ್ಟ ಕುಸಿತಕ್ಕೂ ಕಾರಣವಾಗಲಿದೆ ಎಂಬ ಆರೋಪ ಕೇಳಿಬಂದಿದೆ.
ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ವಯೋಮಿತಿ 65 ವರ್ಷದಿಂದ 55 ವರ್ಷಕ್ಕೆ ಇಳಿಸಲಾಗಿದೆ. ಇದಕ್ಕೆ ಕಾರಣ ಮತ್ತು ಹಿಂದಿನ ಉದ್ದೇಶವನ್ನು ಆಡಳಿತ ಮತ್ತು ತರಬೇತಿ ಸಂಸ್ಥೆಯು ಬಹಿರಂಗಪಡಿಸಿಲ್ಲ. ಅಕ್ಟೋಬರ್ 10ರಂದು ಸಂಸ್ಥೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯಲ್ಲಿ 55 ವರ್ಷದೊಳಗಿನ 5ರಿಂದ 7 ವರ್ಷ ಬೋಧನಾ ಅನುಭವ ಇರುವ, ಶೇ.55 ಅಂಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದ, ಕನ್ನಡ ಭಾಷಾ ಕೌಶಲ ಇರುವ ಪಿಎಚ್.ಡಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೆಂದು ತಿಳಿಸಿದೆ.
ಎಟಿಐ ರಾಜ್ಯ ನಾಗರಿಕ ಸೇವಾ ವೃಂದದ ಪತ್ರಾಂಕಿತ ಅಧಿಕಾರಿಗಳಿಗೆ ವೃತ್ತಿ ಬುನಾದಿ ತರಬೇತಿ, ಕರ್ನಾಟಕ ಕೇಡರ್‌ಗೆ ಆಯ್ಕೆಯಾದ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಅನ್ಯ ಸೇವಾ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ಬುನಾದಿ ತರಬೇತಿ ನೀಡುತ್ತದೆ. ಹಿರಿಯ ಅಧಿಕಾರಿಗಳಿಗೆ ಪುನರ್‌ಮನನ ತರಬೇತಿ ನೀಡುವ ಮೂಲಕ ಆಡಳಿತದ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಹಕಾರಿ ಆಗಲಿ ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಉದ್ದೇಶಕ್ಕೆ ಇದೀಗ ಪೆಟ್ಟುಬಿದ್ದಿದೆ.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಿ, ನುರಿತವರನ್ನಾಗಿ ಮಾಡುವುದು ಸಂಸ್ಥೆಯ ಹೊಣೆಗಾರಿಕೆಯಾಗಿದೆ. ಅದಕ್ಕೆ ವಿವಿಧ ಕ್ಷೇತ್ರಗಳ ತಜ್ಞರು ಹಾಗೂ ಸಂಶೋಧಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತದೆ. ಸರ್ಕಾರಿ ಕೆಲಸದಲ್ಲಿ ನಿವೃತ್ತರಾದ ಅನುಭವಿಗಳಿಗೂ ಅರ್ಜಿ ಸಲ್ಲಿಸುವ ಅವಕಾಶವನ್ನು ಹಿಂದೆ ನೀಡಿತ್ತು. ಇದೀಗ ವಯೋಮಿತಿ ಕಡಿಮೆಗೊಳಿಸುವುದರಿಂದ ಅವರು ಅವಕಾಶ ಸಿಗದಂತೆ ಮಾಡಿದ್ದು, ತಜ್ಞರ ಕೊರತೆ ಉಂಟಾಗಲಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ.
ವಯೋಮಿತಿ ಇಳಿಕೆಗೆ ಯಾವ ಮಾನದಂಡ ಪಾಲನೆ ಮಾಡಲಾಗಿದೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ. ಸಂದರ್ಶನ ಪರೀಕ್ಷೆಯ ಜತೆಗೆ ಲಿಖಿತ ಪರೀಕ್ಷೆಯನ್ನೂ ನಡೆಸುತ್ತಿರುವುದರಿಂದ ವಯಸ್ಸಾದ ತಜ್ಞರು ಅರ್ಜಿ ಹಾಕಲು ಮನಸ್ಸು ಮಾಡುತ್ತಿಲ್ಲ. 2010ರಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ನಿವೃತ್ತರಾದ ಅನುಭವಿಗಳು ಇರುತ್ತಿದ್ದರು. ಹೀಗಾಗಿಯೇ 2014ರವರೆಗೂ ಹಲವು ಗ್ರಂಥ ಪ್ರಕಟಣೆಯನ್ನು ಮಾಡಲಾಗುತ್ತಿತ್ತು. ಈಗ ಅದೂ ಸ್ಥಗಿತಗೊಂಡಿದೆ ಎಂದು ಸಂಸ್ಥೆಯ ಗುತ್ತಿಗೆ ತರಬೇತುದಾರ ಜೆ.ಆರ್.ಪರಮೇಶ್ ತಿಳಿಸಿದ್ದಾರೆ.
ಪ್ಯಾಕ್ ಎಂಬ ಸಂಸ್ಥೆಗೆ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ವಹಿಸಿದ್ದು, ಅದು ಇಂಗ್ಲಿಷ್‌ಗೆ ಆದ್ಯತೆ ನೀಡಿ ಕನ್ನಡವನ್ನು ಕಡೆಗಣಿಸಿದೆ. ಇದರೊಂದಿಗೆ ಸರ್ಕಾರದ ಆದೇಶವನ್ನು ಎಟಿಐ ಉಲ್ಲಂಘಿಸಿದೆ ಎಂದೂ ದೂರಿದ್ದಾರೆ.
---------------
ಸರ್ಕಾರ ರೂಪಿಸಿರುವ ಮಾರ್ಗಸೂಚಿ
ಹೊಸ ನಿರ್ಣಯಕ್ಕೆ ಕಾರಣವನ್ನು ಈಗಾಗಲೇ ಕರ್ತವ್ಯನಿರತ ಸಿಬ್ಬಂದಿಗೂ ಕೊಟ್ಟಿಲ್ಲ. ಗೊಂದಲ ಸೃಷ್ಟಿಸಿ, ನೇಮಕಾತಿ ಪ್ರಕ್ರಿಯೆಯನ್ನು ಅವಸರದಲ್ಲಿ ಪೂರ್ಣಗೊಳಿಸುವ ಯೋಚನೆ ಮಾಡಲಾಗುತ್ತಿದೆ ಎಂಬ ಆರೋಪದ ಕೇಳಿಬಂದಿದೆ. ಈ ವಿಷಯ ಕುರಿತು ಪ್ರತಿಕ್ರಿಯಿಸಿದ ಎಟಿಐ ಜಂಟಿ ನಿರ್ದೇಶಕಿ ಬಿ.ಎನ್.ವೀಣಾ ಅವರು ನಿಯಮಾವಳಿ ಅನುಸಾರವೇ ಎಟಿಐನ ಬೋಧಕ, ಬೋಧಕೇತರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರ ರೂಪಿಸಿರುವ ಮಾರ್ಗಸೂಚಿ, ನಿಯಮಗಳ ಅನುಗುಣವಾಗಿಯೇ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
------------
ನೇಮಕಾತಿಗಾಗಿ ಅಧಿಸೂಚನೆ
ಸಂಸ್ಥೆಯ ವಿಪತ್ತು ನಿರ್ವಹಣಾ ಕೇಂದ್ರ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಕೇಂದ್ರ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಕೋಶ ಇ-ಆಡಳಿತ ಮತ್ತು ದತ್ತಾಂಶ ಕೇಂದ್ರದಲ್ಲಿ ಕೆಲಸ ಮಾಡುವ ಹಿರಿಯ ಹಾಗೂ ಕಿರಿಯ ಸಿಬ್ಬಂದಿ ಹುದ್ದೆಗಳಿಗೆ ಈ ನಿಯಮ ಅನ್ವಯ ಆಗಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಕ್ರಮವಾಗಿ 6 ಮತ್ತು 5 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ಆಡಳಿತ, ಕಾನೂನು, ಅರ್ಥಶಾಸ್ತ್ರ, ಲಿಂಗ ಮತ್ತು ಮಕ್ಕಳ ಕೇಂದ್ರ, ವ್ಯವಹಾರ ನಿರ್ವಹಣೆ ಹಾಗೂ ನಾಯಕತ್ವ ಕೌಶಲ ಮತ್ತು ಜೀವನೋಪಾಯದ ವಿಷಯ ತಜ್ಞರು ಹಾಗೂ 4 ದತ್ತಾಂಶ ವಿಶ್ಲೇಷಕ ಹುದ್ದೆಗಳಿಗೂ ಈ ನಿಯಮ ಅನ್ವಯವಾಗಲಿದೆ. ದತ್ತಾಂಶ ವಿಶ್ಲೇಷಕ ಹುದ್ದೆಗೆ 2-4 ವರ್ಷ ಸೇವಾನುಭವ ಇರಬೇಕೆಂದು ಹೇಳಲಾಗಿದೆ. ಬಹು ಕೆಲಸ (ಮಲ್ಟಿ ಟಾಸ್ಕಿಂಗ್ ಸ್ಟಾಫ್) ಮಾಡುವ 4 ಹುದ್ದೆಗಳಿಗೂ 55 ವರ್ಷದ ವಯೋಮಾನದ ಮಿತಿ ನಿಗದಿ ಮಾಡಲಾಗಿದೆ. ಈ ನಿಯಮ ಆಧರಿಸಿ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.