ಹುಣಸೂರು ನಗರದ ಡೀಡ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮಾತನಾಡಿದರು. ಹರ್ಷ, ಲಕ್ಷ್ಮೀ, ವಿಠಲ್ ಇತರರಿದ್ದರು.
ಹುಣಸೂರು : ತಾಲೂಕಿನ 33 ಆದಿವಾಸಿ ಗಿರಿಜನ ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು ಎಂಬುದು ಸೇರಿದಂತೆ ಅನುಭೋಗದಲ್ಲಿರುವ ಕೃಷಿಭೂಮಿಯ ಭೂಮಾಲೀಕತ್ವದ ಹಕ್ಕು ನೀಡಲು ಗಿರಿಜನರು ರಾಜ್ಯ ಕಂದಾಯ ಸಚಿವರನ್ನು ಆಗ್ರಹಿಸಿದ್ದಾರೆ.
ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಶುಕ್ರವಾರ ಈ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿ, ರಾಜ್ಯ ಕಂದಾಯ ಸಚಿವರಿಗೆ ಮೇ ತಿಂಗಳಿನಲ್ಲೇ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. ತಾಲೂಕಿನ 33 ಹಾಡಿಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಹಾಗೂ 22 ಹಾಡಿಗಳ 450 ಕುಟುಂಬಗಳಿಗೆ ಇರುವ 1,200 ಎಕರೆ ಕೃಷಿ ಭೂಮಿಗೆ ಪೋಡು ಮಾಡಿಸಿ ಅಂತಿಮ ಭೂದಾಖಲೆ ನೀಡಲು ವಿನಂತಿ ಮಾಡಲಾಗಿದೆ. ತಾಲೂಕಿನ ಕಾಡುವಡ್ಡರಗಡಿ ಸರ್ವೇ ನಂ.33ರಲ್ಲಿ ಈ ಹಿಂದೆ ಆದಿವಾಸಿಗಳಿಗೆ ನೀಡಿದ್ದ 117 ಎಕರೆ ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಲು ಸಾಗುವಳಿ ರದ್ದುಪಡಿಸಲಾಗಿತ್ತು. ಈ ಕ್ರಮವನ್ನು ಆದಿವಾಸಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೋರ್ಟ್‌ನಲ್ಲಿ ಪ್ರಶ್ನಿಸಿ ಅಕ್ರಮವಾಗಿ ನೀಡಿದ್ದ ಸಾಗುವಳಿ ರದ್ದುಪಡಿಸಲಾಗಿತ್ತು.
ಹಾಲಿ ಭೂಮಿಯಲ್ಲಿ ಮೊದಲಿನಿಂದಲೂ ತೆಕ್ಲಹಾಡಿ ಹಾಗೂ ಮಾದ್ಯಯನಕಟ್ಟೆ ಹಾಡಿಗಳ ಕುಟುಂಬಗಳು ವಾಸ ಇರುವುದರಿಂದ ಅವರಿಗೆ ಪುನಃ ಸಾಗುವಳಿ ಪತ್ರ ನೀಡಲು ಒತ್ತಾಯಿಸಲಾಗಿದೆ. ಅಲ್ಲದೆ ನೆರಳಕುಪ್ಪೆ ಬಿ ಹಾಡಿಯ 6 ಕುಟುಂಬಗಳು ನಿರ್ವಹಿಸುವ 12 ಎಕರೆ ಭೂಮಿಗೆ ಬೇರೆಯವರು ಸಾಗುವಳಿ ಪತ್ರ ಪಡೆದಿರುವುದರಿಂದ ಅವರ ಸಾಗುವಳಿ ರದ್ದುಗೊಳಿಸಿ 46 ವರ್ಷಗಳಿಂದ ಅನುಭವದಲ್ಲಿ ಇರುವ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಲು ವಿನಂತಿಸಲಾಗಿದೆ. ಆದರೆ ಇನ್ನು ಯಾವ ಕ್ರಮವನ್ನೂ ಜರುಗಿಸದ ಕಾರಣ ಮತ್ತೆ ಸಚಿವರು, ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಪತ್ರಬರೆದು ತುರ್ತಾಗಿ ಕ್ರಮ ವಹಿಸಲು ಮನವಿ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಸೂಕ್ತ ಉಪಕ್ರಮಗಳನ್ನು ಕೈಗೊಂಡು ಆದಿವಾಸಿಗಳ ಭೂಮಿಯ ಹಕ್ಕನ್ನು ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಭರತವಾಡಿ ಲಕ್ಷ್ಮೀ, ವಿಠಲ್, ಶಿವಣ್ಣ, ಕೆಂಪಮ್ಮ, ಡೀಡ್ ನಿರ್ದೇಶಕ ಡಾ. ಎಸ್. ಎಸ್‌ಶ್ರೀಕಾಂತ್ ಇದ್ದರು.