ಬರಪೀಡಿತ ತಾಲೂಕುಗಳ ಪಟ್ಟಿಗೆ ಪಿರಿಯಾಪಟ್ಟಣ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ತಾಲೂಕು ಜೆಡಿಎಸ್ ಘಟಕದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಸರ್ಗಪ್ರಿಯಗೆ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕ ಕೆ.ಮಹದೇವ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಮಂಜುನಾಥ್, ಕಾನೂನು ಸಲಹೆಗಾರ ಜೆ.ಎಸ್.ನಾಗರಾಜ್ ಇತರರು ಇದ್ದರು.
ಪಿರಿಯಾಪಟ್ಟಣ: ಪಿರಿಯಾಪಟ್ಟಣವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹಿಸಿ ತಾಲೂಕು ಜೆಡಿಎಸ್‌ನಿಂದ ಶನಿವಾರ ಪ್ರತಿಭಟನೆ ನಡೆಯಿತು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಮಾಜಿ ಶಾಸಕ ಕೆ.ಮಹದೇವ್ ನೇತೃತ್ವದಲ್ಲಿ ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದ ಬಳಿ ಜಮಾವಣೆಗೊಂಡರು. ತಾಲೂಕಿನ ಶಾಸಕ ಮತ್ತು ಸರ್ಕಾರದ ವಿರುದ್ಧದ ಘೋಷಣಾ ಫಲಕಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ತೆರೆದ ಪ್ರತಿಭಟನಾಕಾರರು, ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಾಹನ ಸಂಚಾರ ತಡೆದು ಶಾಸಕ ಮತ್ತು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಬಿಎಂ ರಸ್ತೆಯ ಮೂಲಕ ತಾಲೂಕು ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ ತಹಸೀಲ್ದಾರ್ ನಿಸರ್ಗಪ್ರಿಯ ಅವರಿಗೆ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾಜಿ ಶಾಸಕ ಕೆ.ಮಹದೇವ್ ಮಾತನಾಡಿ, ತಾಲೂಕಿನಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಶೇ.75ರಷ್ಟು ಮಳೆ ಕೊರತೆಯಾಗಿದ್ದು, ತಾಲೂಕಿನ ಬಹುಪಾಲಿನ ಎಲ್ಲ ಕೆರೆ-ಕಟ್ಟೆಗಳು ಒಣಗಿವೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿತಗೊಂಡಿದ್ದು ಬೋರ್‌ವೆಲ್‌ಗಳಲ್ಲೂ ಸಮರ್ಪಕವಾಗಿ ನೀರು ಸಿಗದೆ ತಾಲೂಕಿನ ಅನ್ನದಾತರು ಪರದಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಕಾಲದಲ್ಲಿ ಮಳೆಯಾಗದೆ ಮುಸುಕಿನ ಜೋಳ, ಶುಂಠಿ, ಅಡಿಕೆ, ತೆಂಗು ಮತ್ತಿತರ ಬೆಳೆಗಳು ಒಣಗತೊಡಗಿದ್ದು ರೈತರಿಗೆ ದಿಕ್ಕೇ ಕಾಣದಂತಾಗಿದೆ. ತಾಲೂಕಿನ ಅನ್ನದಾತರು ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರೂ ಸಹ ತಾಲೂಕಿನ ಬರ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡದೆ ಇರುವುದರಿಂದ ನಮ್ಮ ತಾಲೂಕು ಇದುವರೆಗೂ ಬರಪೀಡಿತ ತಾಲೂಕು ಎಂದು ಘೋಷಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಿಸಿದ್ದರೂ ಸಹ ಇದುವರೆಗೂ ಯಾವ ಕೆರೆಯೂ ಭರ್ತಿಯಾಗಿಲ್ಲ ಎಂದು ಕಿಡಿಕಾರಿದರು. ಯೋಜನೆ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ ಗುತ್ತಿಗೆದಾರರು ವ್ಯವಸ್ಥಿತವಾಗಿ ಕಾಮಗಾರಿ ನಡೆಸದೆ ಇರುವುದರಿಂದ ಬಹುತೇಕ ಕಡೆಗಳಲ್ಲಿ ಲೋಪ ದೋಷ ಕಂಡುಬರುತ್ತಿದ್ದು ಇದರ ರಿಪೇರಿ ಕೆಲಸದಲ್ಲಿಯೇ ಇನ್ನೂ ನಿರತರಾಗಿದ್ದಾರೆ. ಈ ಯೋಜನೆಯಿಂದ ಕೆರೆಗಳು ಭರ್ತಿಯಾಗದಿದ್ದರೂ ಚಿಂತೆಯಿಲ್ಲ. ವ್ಯಾಪಕ ಭ್ರಷ್ಟಾಚಾರದಿಂದಾಗಿ ಶಾಸಕರ ಜೇಬು ಮಾತ್ರ ಭರ್ಜರಿಯಾಗಿ ಭರ್ತಿಯಾಗುತ್ತಿದೆ ಎಂದು ಆರೋಪಿಸಿದರು.
ಮಳೆ ಇಲ್ಲದೆ ತಾಲೂಕಿನಲ್ಲಿ ಸೆಪ್ಟೆಂಬರ್‌ನಲ್ಲಿಯೇ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಕಾಡುತ್ತಿದ್ದು, ಮುಂಬರುವ ದಿನಗಳಲ್ಲಿ ರೈತರ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಈ ಕೂಡಲೇ ಸರ್ಕಾರ ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದಲ್ಲಿ ತಾಲೂಕು ಜೆಡಿಎಸ್ ಘಟಕವು ಮುಂಬರುವ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಮಂಜುನಾಥ್, ಕಾನೂನು ಸಲಹೆಗಾರ ಜೆ.ಎಸ್.ನಾಗರಾಜ್, ಮುಖಂಡರಾದ ಕೆ.ರಮೇಶ್, ಎಚ್.ಡಿ.ರಾಜೇಂದ್ರ, ಗಗನ್, ಮೋಹನ್ ರಾಜ್, ಪ್ರೇಮ್‌ಕುಮಾರ್, ಪರಶಿವಮೂರ್ತಿ, ಅತ್ತಹರ್ ಮತಿನ್ ಮತ್ತಿತರರು ಇದ್ದರು.