ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆ, ವಿದ್ಯುತ್ ಸರಬರಾಜು ಮತ್ತು ಮಳೆ ಕೊರತೆ ಇತ್ಯಾದಿ ವಿಷಯಗಳ ಬಗ್ಗೆ ಕರೆಯಲಾದ ಎರಡು ತಾಲೂಕುಗಳ ರೈತ ಮುಖಂಡರ ಸಭೆಯಲ್ಲಿ ಶಾಸಕ ಡಿ.ರವಿಶಂಕರ್ ಮಾತನಾಡಿದರು. ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕಿಯಾ ಬೇಗಂ, ಇಒಗಳಾದ ವಿ.ಪಿ.ಕುಲದೀಪ್, ಎಸ್.ರವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ರೈತ ಮುಖಂಡರಾದ ಗರುಡಗಂಭ ಸ್ವಾಮಿ, ಎಂ.ಜೆ.ಕುಮಾರ್, ಜೆ.ಶಿವಣ್ಣ ಹಾಜರಿದ್ದರು.  
ಮೈಸೂರು

ನಾಲೆಗಳಿಗೆ ನೀರು ಹರಿಸಲು ಜುಲೈ ತಿಂಗಳ ಕೊನೆಯಲ್ಲಿ ತೀರ್ಮಾನ

ಕೆ.ಆರ್.ನಗರ: ಮಳೆ ಅಭಾವದಿಂದ ಅಣ್ಣೆಕಟ್ಟೆಗಳಲ್ಲಿ ನೀರು ಸಂಗ್ರಹಣ ಕೊರತೆ ಎದುರಾಗಿದ್ದರೂ ರೈತರ ಹಿತದೃಷ್ಟಿಯಿಂದ ನಾಲೆಗಳಿಗೆ ನೀರು ಹರಿಸಲು ಜುಲೈ ತಿಂಗಳ ಕೊನೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆ, ವಿದ್ಯುತ್ ಸರಬರಾಜು ಮತ್ತು ಮಳೆ ಕೊರತೆ ಇತ್ಯಾದಿ ವಿಷಯಗಳ ಬಗ್ಗೆ ಕರೆಯಲಾದ ಎರಡು ತಾಲೂಕುಗಳ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮುಂಗಾರು ಮಳೆಯ ಕೊರತೆಯ ಬಗ್ಗೆ ಮುಖ್ಯಮಂತ್ರಿ ನಡೆಸಲಿರುವ ಸಭೆಯ ನಂತರ ನಾಲೆಗಳಿಗೆ ನೀರು ಹರಿಸುವ ಸಂಬಂಧ ನಿರ್ಧಾರ ಮಾಡಲಾಗುತ್ತದೆ ಎಂದರು.
ನಾಲೆಯ ಕೊನೆಯ ಹಂತದ ರೈತರ ಜಮೀನುಗಳಿಗೆ ನೀರು ಸರಾಗವಾಗಿ ಹರಿಯಬೇಕು. ಅದಕ್ಕಾಗಿ ಹೂಳು ಎತ್ತುವ ಕಾಮಗಾರಿಯನ್ನು ಇಲಾಖಾಧಿಕಾರಿಗಳ ಅಂದಾಜು ಪಟ್ಟಿಯಂತೆ ಮಾಡಿಸಬೇಕು. ಗುತ್ತಿಗೆದಾರರಿಗೆ ಕರುಣೆ ತೋರಿಸಲು ಇಂಜಿನಿಯರ್‌ಗಳು ಮುಂದಾಗಬಾರದೆಂದು ತಾಕೀತು ಮಾಡಿದರು.
ಚುಂಚನಟಕ್ಟೆಯ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್‌ನವರು ಪುನರಾರಂಭ ಮಾಡುವ ಭರವಸೆ ನೀಡಿದ್ದಾರೆ. ಇಲ್ಲದಿದ್ದರೆ ಬದಲಿ ವ್ಯವಸ್ಥೆ ಮಾಡಲು ಸರ್ಕಾರ ಸಿದ್ದವಿದ್ದು ಶೀಘ್ರದಲ್ಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಸಿ ಮುಖ್ಯಮಂತ್ರಿ ಗಮನಕ್ಕೆ ತಂದು ಕಾರ್ಖಾನೆ ಆರಂಭದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಂಪರ್ಕವಾಗಿ ಮತ್ತು ನಿಗದಿ ಮಾಡಿರುವ ಸಮಯದಷ್ಟು ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂಬ ವ್ಯಾಪಕ ದೂರುಗಳಿವೆ. ಆದ್ದರಿಂದ ಎರಡೂ ತಾಲೂಕುಗಳಲ್ಲಿ ರೈತರ ಜತೆ ಇಲಾಖೆಯ ಅಧಿಕಾರಿಗಳ ಸಂಪರ್ಕ ಸಭೆ ನಡೆಸುವಂತೆ ಸೂಚಿಸಿದರು.
ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕಿಯಾ ಬೇಗಂ, ಇಒಗಳಾದ ವಿ.ಪಿ.ಕುಲದೀಪ್, ಎಸ್.ರವಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ರೈತ ಮುಖಂಡರಾದ ಗರುಡಗಂಭ ಸ್ವಾಮಿ, ಎಂ.ಜೆ.ಕುಮಾರ್, ಜೆ.ಶಿವಣ್ಣ, ಎಂ.ಎಸ್.ನಟರಾಜು, ರಾಮಪ್ರಸಾದ್, ಕುಬೇರ, ಎಂ.ಎನ್.ನಾಗೇಶ್, ಸಿ.ಕೆ.ರವೀಂದ್ರ, ಶಿವರಾಮ, ಎಸ್.ಬಿ.ಶೇಖರ್, ಬಸವರಾಜು, ಸುನೀತಾ, ನೇತ್ರಾವತಿ, ಗೋವಿಂದೇಗೌಡ, ಕೃಷ್ಣನಾಯಕ, ಕಾಟ್ನಾಳು ಮಹದೇವ್, ಎಂ.ಬಿ.ಲೋಕನಾಥ್, ಪ್ರಸನ್ನ ಮತ್ತಿತರರು ಹಾಜರಿದ್ದರು.