ಮುಖ್ಯಮಂತ್ರಿ ಸಿದ್ದರಾಮಯ್ಯ 
ಮೈಸೂರು

10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ನಿರ್ಧಾರ : ಸಿಎಂ ಸಿದ್ದರಾಮಯ್ಯ

ಪ್ರಮುಖ ಮುಖ್ಯಾಂಶಗಳು

  • ಮೆಕ್ಕೆಜೋಳ ಆಮದು ನಿಲ್ಲಿಸುವಂತೆ ಒತ್ತಾಯ
  • ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ
  • ಬೆಳೆಹಾನಿ ಪರಿಹಾರ ನೀಡಲು ಪ್ರಧಾನಿಗೆ ಮನವಿ
ಮೈಸೂರು: ಮೆಕ್ಕೆಜೋಳಕ್ಕೆ ಈ ಬಾರಿ ಕ್ವಿಂಟಲ್‌ಗೆ 2400 ರೂ. ಎಂಎಸ್‌ಪಿ ನಿಗದಿಯಾಗಿದೆ. ಆದರೆ, ಇಲ್ಲಿವರೆಗೆ ಖರೀದಿ ಕೇಂದ್ರ ತೆರೆದಿಲ್ಲ. ರೈತರು ಖರೀದಿ ಕೇಂದ್ರ ತೆರೆದು ಮೆಕ್ಕೆಜೋಳ ಖರೀದಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಕೆಲವು ಕಡೆ ಚಳವಳಿ ನಡೆಯುತ್ತಿದೆ. ಈ ವಿಚಾರವಾಗಿ ಸಭೆ ನಡೆಸಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ರೈತರು ಹೆಚ್ಚಾಗಿ ಮೆಕ್ಕೆಜೋಳ ಬೆಳೆದಿದ್ದಾರೆ. 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ದೇಶದ ವಿವಿಧೆಡೆ ಹೆಚ್ಚಾಗಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಈ ವಿಚಾರ ಗೊತ್ತಿದ್ದರೂ ಕೇಂದ್ರ ಸರ್ಕಾರ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಮೆಕ್ಕೆಜೋಳ ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

ಡಿಸ್ಟಿಲರಿಗಳಿಗೆ ನಿರ್ದೇಶನ

ಕೇಂದ್ರದ ನೋಡಲ್ ಏಜೆನ್ಸಿಗಳಾದ ನಫೆಡ್, ಎಂಸಿಸಿಎಫ್ ಇನ್ನೂ ಖರೀದಿಸುವ ಪ್ರಕ್ರಿಯೆ ಪ್ರಾರಂಭಿಸಿಲ್ಲ. ಮೆಕ್ಕಜೋಳದ ದರ ಕಡಿಮೆ ಇದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಡಿಸ್ಟಿಲರಿಗಳು ಮಾರುಕಟ್ಟೆಯಲ್ಲಿ ಮೊದಲೇ ಮೆಕ್ಕೆ ಜೋಳವನ್ನು ಖರೀದಿಸಿ ದಾಸ್ತಾನು ಇಟ್ಟುಕೊಂಡಿದ್ದು, ಹೊಸದಾಗಿ ಖರೀದಿಸುತ್ತಿಲ್ಲ. ಇದು ನಿಯಮಕ್ಕೆ ವಿರುದ್ಧವಾಗಿದೆ. ಮೆಕ್ಕೆಜೋಳ ಖರೀದಿಸುವಂತೆ ಡಿಸ್ಟಿಲರಿಗಳಿಗೆ ಸೂಚನೆ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಮೆಕ್ಕೆಜೋಳ ಬೆಳೆದಿರುವ ರೈತರಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ಒದಗಿಸಲಿದೆ. ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಲಾಗುವುದು. ಒಟ್ಟು 10 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಲಾಗಿದೆ. ಹೆಸರುಕಾಳು ಬೆಳೆದಿರುವ ರೈತರ ಸಮಸ್ಯೆಗೂ ರಾಜ್ಯ ಸರ್ಕಾರ ಸ್ಪಂದಿಸಲಿದೆ ಎಂದು ಹೇಳಿದರು.

ಪ್ರಧಾನಿಯೊಂದಿಗೆ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾಗಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಗಮನ ಸೆಳೆದಿದ್ದೇನೆ. ಅಲ್ಲದೆ, ಬೆಳೆಹಾನಿಗೆ ಪರಿಹಾರ ಬಿಡುಗಡೆ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಒಟ್ಟು 15 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರ ನೀಡುವಂತೆ ಕೋರಲಾಗಿದೆ. ಅವರು ನಮ್ಮ ಬೇಡಿಕೆಗೆ ಸ್ಪಂದಿಸುತ್ತಾರೆ ಅಂದುಕೊಂಡಿದ್ದೇನೆ. ಇಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿಯ ಕುರಿತು ಪ್ರಧಾನಿ ಅವರಿಗೆ ಮಾಹಿತಿ ಇತ್ತು ಎಂದು ಹೇಳಿದರು.