ನಗರದ ಜಲದರ್ಶಿನಿ ಅತಿಥಿಗೃದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಪಿ.ಪ್ರಶಾಂತ್ ಗೌಡ ಮಾತನಾಡಿದರು. ಎಲ್.ನಾಗೇಂದ್ರ, ಕೆ.ವಿ.ಶ್ರೀಧರ್, ಮರಿಸ್ವಾಮಿ, ಚೇತನ್, ಗಿರೀಶ್ ಗೌಡ, ಸುಶೀಲಾ ನಂಜಪ್ಪ, ಎ.ರವಿ, ಬೋರೇಗೌಡ, ರವಿ ರಾಜಕೀಯ, ನಾಗಣ್ಣ ಇತರರಿದ್ದರು.
- ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಆಚರಣ ಸಮಿತಿ ಅಧ್ಯಕ್ಷರನ್ನಾಗಿ ಸತತ ಎರಡನೇ ಬಾರಿಗೆ ನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ ಆಯ್ಕೆ
- ಜಲದರ್ಶಿನಿ ಅತಿಥಿಗೃಹದಲ್ಲಿ ಆಯೋಜಿಸಿದ್ದ ವಿವಿಧ ಸಂಘಟನೆಗಳ ವತಿಯಿಂದ ಸಭೆ
ಮೈಸೂರು: ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಆಚರಣ ಸಮಿತಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ, ರಾಜ್ಯ ಒಕ್ಕಲಿಗರ ಸಂಘಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳನ್ನು ಒಳಗೊಂಡು ಜೂ.27ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲು ತೀರ್ಮಾನಿಸಲಾಗಿದೆ.
ಕೆಂಪೇಗೌಡರ ಜಯಂತಿ ಆಚರಣೆ ಸಂಬಂಧ ನಗರ ಜಲದರ್ಶಿನಿ ಅತಿಥಿಗೃದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಜೂ.27ರಂದೇ ನಗರದ ಕಲಾಮಂದಿರದಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.
ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಆಚರಣ ಸಮಿತಿ ಅಧ್ಯಕ್ಷರನ್ನಾಗಿ ಸತತ ಎರಡನೇ ಬಾರಿಗೆ ನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಜಯಂತಿಯನ್ನು ಅಚ್ಚುಕಟ್ಟಾಗಿ ಆಯೋಜಿಸುವ ಸಂಬಂಧ ಪ್ರತಿಭಾ ಪುರಸ್ಕಾರ ಸಮಿತಿ, ಸಾಧಕರ ಸನ್ಮಾನ ಸಮಿತಿ, ನಗರ ಪ್ರಚಾರ ಸಮಿತಿ, ಗ್ರಾಮಾಂತರ ಪ್ರಚಾರ ಸಮಿತಿ, ಮೆರವಣಿಗೆ ಸಮಿತಿ ಹಾಗೂ ಆಹಾರ ಸಮಿತಿಗಳನ್ನು ರಚಿಸಲಾಯಿತು. ಜತೆಗೆ 10 ಜನ ಹಿರಿಯರನ್ನು ಸಮಿತಿಯಲ್ಲಿ ಗೌರವ ಸಲಹೆಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ:
ಈ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಸಮುದಾಯ 200 ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸುವುದು ಹಾಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿರುವ ಎಲ್ಲ ಸಮುದಾಯಗಳ ಸಾಧಕರನ್ನು ಒಳಗೊಂಡ 20 ಜನರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.
ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಆಚರಣ ಸಮಿತಿ ಅಧ್ಯಕ್ಷ ಪಿ.ಪ್ರಶಾಂತ್ ಗೌಡ ಮಾತನಾಡಿ, ಸಮುದಾಯದ ಎಲ್ಲರೂ ಜತೆಗೂಡಿ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಹಾಗೂ ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ. ಜಯಂತಿ ಕಾರ್ಯಕ್ರಮದಲ್ಲಿ ಯಾವುದೇ ರೀತಿ ಲೋಪ ಆಗದಂತೆ ಎಲ್ಲರೂ ಕೆಲಸ ನಿರ್ವಹಿಸಬೇಕು. ಎಲ್ಲರೂ ಶ್ರಮ ವಹಿಸುವ ಮೂಲಕ ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ದಿನ ಅಚ್ಚುಕಟ್ಟಾಗಿ ಕಲಾತಂಡಗಳ ಮೆರವಣಿಗೆ ಆಯೋಜಿಸಬೇಕು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಬೇಕು. ಮೆರವಣಿಗೆಯಲ್ಲಿ ವಿವಿಧ ಬಗೆಯ ಕಲಾತಂಡಗಳು ಸೇರಿದಂತೆ ಹೆಚ್ಚು ಜನ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಆರಂಭದಿಂದ ಅಂತ್ಯದವರೆಗೂ ಎಲ್ಲರೂ ಉತ್ಸಾಹದಿಂದ ಭಾಗವಹಿಸಬೇಕು. ಮೆರವಣಿಗೆ ಮಧ್ಯದಲ್ಲಿ ಯಾರೂ ಹೋಗಬಾರದು ಎಂದು ತಿಳಿಸಿದರು.
ಚುನಾವಣೆ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಎಲ್ಲರೂ ಪಕ್ಷಬೇಧ ಮರೆತು ಒಂದಾಗಬೇಕು. ಎಲ್ಲರೂ ಜತೆಗೂಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಬೇಕು. ವೇದಿಕೆ ಕಾರ್ಯಕ್ರಮದಲ್ಲೂ ಹೆಚ್ಚು ಜನ ಸೇರುವಂತೆ ಮಾಡಬೇಕು ಎಂದರು.
ಶಾಸಕ ಕೆ.ಹರೀಶ್‌ಗೌಡ, ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕ ಕೆ.ವಿ.ಶ್ರೀಧರ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಚೇತನ್, ನಿರ್ದೇಶಕರಾದ ಗಿರೀಶ್ ಗೌಡ, ಸುಶೀಲಾ ನಂಜಪ್ಪ, ಎ.ರವಿ, ಬೋರೇಗೌಡ, ರವಿ ರಾಜಕೀಯ, ನಾಗಣ್ಣ, ನೇಗಿಲಯೋಗಿ ಸೇವಾ ಟ್ರಸ್ಟ್ ಅಧ್ಯಕ್ಷ ರವಿಕುಮಾರ್, ಮೈಸೂರು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ವೇದರಾಜು, ಬೆಳವಾಡಿ ಶ್ರೀನಿವಾಸ್, ರಾಜಣ್ಣ, ಕುಮಾರ್ ಗೌಡ, ಮಹೇಶ್, ಸತೀಶ್ ಗೌಡ, ಮೋಹನ್‌ಕುಮಾರ್‌ಗೌಡ, ಕೆಎಸ್‌ಆರ್‌ಟಿಸಿ ವಿಶ್ವನಾಥ್, ನಿವೃತ್ತ ಪೊಲೀಸ್ ಸಂಘದ ಮರಿಗೌಡ, ಸ್ವಾಮಿಗೌಡ, ಹಿನಕಲ್ ರಾಜಕುಮಾರ್, ಗೋಕುಲ್ ಗೋವರ್ಧನ್, ಚಂದ್ರು ಮಂಡ್ಯ ಇತರರಿದ್ದರು.