ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿದರು. ಮುಖಂಡರಾದ ಜಯರಾಂ, ಹೊನ್ನಪ್ಪ, ಪಿ.ಆರ್.ರಾಚಪ್ಪ ಇತರರಿದ್ದರು. 
ಮೈಸೂರು

ಸ್ವಾತಂತ್ರ್ಯ ದಿನ ಅದ್ದೂರಿ ಆಚರಣೆಗೆ ನಿರ್ಧಾರ

ಹುಣಸೂರು :

ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಮಿತಿ ಕಾರ್ಯದರ್ಶಿ ಹಾಗೂ ತಹಸೀಲ್ದಾರ್ ಜೆ.ಮಂಜುನಾಥ್, ನಗರಸಭೆ ಮೈದಾನದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಎಂದಿನಂತೆ ಆಯೋಜಿಸಲಾಗುತ್ತದೆ. ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಮೈದಾನದಲ್ಲಿ ವೇದಿಕೆ, ಧ್ವಜಸ್ಥಂಭ ಸ್ಥಾಪನೆ ಸೇರಿದಂತೆ ವಿದ್ಯಾರ್ಥಿಗಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುವಾಗುವಂತೆ ಸಿದ್ಧತೆ ಕೈಗೊಳ್ಳಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಶಾಲೆಗಳ ಆಯ್ಕೆ, ಧ್ವಜಾರೋಹಣ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಬೇಕು ಎಂದು ಸೂಚಿಸಿದರು.
ಪೊಲೀಸ್ ಇಲಾಖೆ ಬಂದೋಬಸ್ತ್, ಆರೋಗ್ಯ ಇಲಾಖೆಯಿಂದ ತುರ್ತು ಸೇವಾ ವಾಹನ ಮತ್ತು ವೈದ್ಯರು ಮತ್ತು ದಾದಿಯರನ್ನು ಒಳಗೊಂಡ ಒಂದು ತಂಡ ಮೈದಾನದಲ್ಲಿ ಹಾಜರಿರಲು ಕ್ರಮ ವಹಿಸಬೇಕು. ಈ ಬಾರಿ ಆದಿವಾಸಿ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಕ್ರಮ ವಹಿಸಲಾಗುವುದು. ಇತರ ಇಲಾಖೆಗಳ ಜವಾಬ್ದಾರಿ ಶೀಘ್ರ ತಿಳಿಸಲಾಗುವುದು. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದಂತೆ ಎಲ್ಲ ಇಲಾಖೆಗಳು ಸಕ್ರಿಯವಾಗಿ ಪಾಲ್ಗೊಂಡು ರಾಷ್ಟ್ರೀಯ ಹಬ್ವವನ್ನು ಸಂಭ್ರಮದಿಂದ ಆಚರಿಸೋಣ ಎಂದರು.

ಇದೇ ವೇಳೆ ಆ.20ರಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಆಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಜಯಂತಿ ಸಭೆಯಲ್ಲಿ ತಿಳಿಸಿದರು. ಬೆಳಗ್ಗೆ 9 ಗಂಟೆಗೆ ಅರಸು ಹುಟ್ಟೂರು ಕಲ್ಲಹಳ್ಳಿಯ ಅರಸು ಸಮಾಧಿಯಲ್ಲಿ ಗಣ್ಯರಿಂದ ಪೂಜೆ, ಗೌರವ ಸಮರ್ಪಣೆ ನಂತರ ಗ್ರಾಮಸ್ಥರೊಂದಿಗೆ ಸಭೆ ಆಯೋಜಿಸಲಾಗುವುದು. ನಂತರ 11 ಗಂಟೆಗೆ ನಗರದ ಎಪಿಎಂಸಿ ವೃತ್ತದಲ್ಲಿರುವ ಅರಸು ಪುತ್ಥಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ಮಾಲಾರ್ಪಣೆ ಮೂಲಕ ಗೌರವ ಸಮರ್ಪಣೆ, ವೇದಿಕೆ ಕಾರ್ಯಕ್ರಮದಲ್ಲಿ ಅರಸು ಒಡನಾಡಿಗಳಿಗೆ ಸನ್ಮಾನ, ಪ್ರತಿಭಾವಂತಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, ಎಲ್ಲ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಅರಸು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಜಯರಾಂ, ಪಿ.ಆರ್.ರಾಚಪ್ಪ, ಮುಖಂಡರಾದ ಹೊನ್ನಪ್ಪ, ಶಿರಸ್ತೇದಾರ್ ಶ್ರೀಪಾದ ನಲವತ್ತವಾಡಕರ್, ಬಿಇಒ ಕಾಳನಾಯಕ, ಲೋಕೋಪಯೋಗಿ ಇಲಾಖೆ ಎಇಇ ಯತೀಶ್, ದೈಹಿಕ ಶಿಕ್ಷಣ ಪರಿವೀಕ್ಷಕ ರವಿ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಇತರರು ಇದ್ದರು.