ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿದರು. ಧರಣೇಶ್, ಇಟ್ನಾ ರಾಜಣ್ಣ, ಸೋಗಹಳ್ಳಿ ಶಿವಣ್ಣ ಎಂ.ಡಿ.ಮಂಚಯ್ಯ, ಪಿ.ನಾಗರಾಜು, ಜಿವಿಕ ಬಸವರಾಜು ಇತರರು ಇದ್ದರು. 
ಮೈಸೂರು

ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಎಚ್.ಡಿ.ಕೋಟೆ: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಜನರಿಗೆ ತಿಳಿಸುವ ಮೂಲಕ ಅವರ ಜಯಂತಿ ಕಾರ್ಯಕ್ರಮವನ್ನು ಹಬ್ಬದಂತೆ ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏ.14 ರಂದು ಶಾಸಕರ ಅಧ್ಯಕ್ಷತೆಯಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ಸರಳವಾಗಿ ಆಚರಣೆ ಮಾಡುತ್ತಿದ್ದು, ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ನಮ್ಮ ದೇಶದಲ್ಲಿ ಜನಿಸದೆ ಇದ್ದಿದ್ದರೆ ಸಂವಿಧಾನ ಎಂಬುದು ಇರುತ್ತಿರಲಿಲ್ಲ. ಮೀಸಲಾತಿ ಎಂಬುದು ನಮಗೆ ಗಗನ ಕುಸುಮ ಆಗುತ್ತಿತ್ತು. ಅಂಬೇಡ್ಕರ್ ಅವರ ನಮ್ಮ ದೇಶದಲ್ಲಿ ಜನಿಸಿದ್ದು ಭಾರತೀಯರ ಪುಣ್ಯ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಮಾಡುವುದೇ ಅದೃಷ್ಟ. ಈ ಅದೃಷ್ಟ ಮತ್ತೊಮ್ಮೆ ಒದಗಿ ಬಂದಿದೆ. ಅಂಬೇಡ್ಕರ್ ಅವರ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಅವರ ಜಯಂತಿಯನ್ನು ಆಚರಣೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಹೈರಿಗೆ ಶಿವರಾಜು ಮಾತನಾಡಿ, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಅವರನ್ನು ಆಹ್ವಾನಿಸಿ ಅದ್ದೂರಿಯಾಗಿ ಆಚರಣೆ ಮಾಡಲು ನಮ್ಮ ಸಮಾಜದಿಂದ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಬಾಬು ಜಗಜೀವನ್‌ರಾಮ್ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಕೊತ್ತೇಗಾಲ ತಿಮ್ಮಯ್ಯ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಇದ್ದಿದ್ದರೆ ಇಂದಿಗೂ ನಾವು ಗುಲಾಮಗಿರಿಯಲ್ಲಿ ಬದುಕಬೇಕಿತ್ತು ಎಂದು ತಿಳಿಸಿದರು.
ಸಭೆಯಲ್ಲಿ ಇಒ ಧರಣೇಶ್, ಆದಿ ಕರ್ನಾಟಕ ಸಮುದಾಯದ ಸರಗೂರು ಅಧ್ಯಕ್ಷ ಇಟ್ನಾ ರಾಜಣ್ಣ, ಮಾಜಿ ಅಧ್ಯಕ್ಷ ಸೋಗಹಳ್ಳಿ ಶಿವಣ್ಣ ಎಂ.ಡಿ.ಮಂಚಯ್ಯ, ಮುಖಂಡರಾದ ಪಿ.ನಾಗರಾಜು, ಜೀವಿಕ ಬಸವರಾಜು, ಹೊಮ್ಮರಗಳ್ಳಿ ಮಹಾದೇವು, ಜೀವಿಕ ಚಂದ್ರಶೇಖರ ಮೂರ್ತಿ, ಬೆಳ್ತೂರು ಮಹೇಶ್, ಅನುಷಾ, ಅಧಿಕಾರಿಗಳಾದ ಡಾ.ರವಿಕುಮಾರ್, ಪಿ.ಸುರೇಶ್, ರಮೇಶ್, ಶಿವರಾಜು, ಗೋವಿಂದ ನಾಯಕ, ದೀಪಾ, ನೇತ್ರಾವತಿ, ಪ್ರಸಾದ್, ನಾಗರಾಜು, ಬಸವರಾಜು, ಸಬ್‌ಇನ್‌ಸ್ಪೆಕ್ಟರ್ ಸುರೇಶ್ ನಾಯಕ್ ಇದ್ದರು.