ಹುಣಸೂರು ನಗರದ ಕಲ್ಕುಣಿಕೆ ಸರ್ಕಾರಿ ಶಾಲೆಯ ಉಳಿವಿಗಾಗಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾಯಿತು. ಬಸವರಾಜು ಕಲ್ಕುಣಿಕೆ, ಶ್ರೀನಿವಾಸಮೂರ್ತಿ, ಬೀರೇಶ್ವರ್, ಜಯಕುಮಾರ್, ವೆಂಕಟೇಶ್ ಇತರರಿದ್ದರು.
ಹುಣಸೂರು: ರಸ್ತೆ ಆಗಲೀಕರಣ ನೆಪವೊಡ್ಡಿ ನಗರದ ಕಲ್ಕುಣಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಹುತೇಕ ಕೆಡವಲು ಮುಂದಾಗಿರುವ ಸರ್ಕಾರದ ನೀತಿಯನ್ನು ಖಂಡಿಸಿ ಮತ್ತು ಶಾಲೆ ಉಳಿವಿಗಾಗಿ ಹೋರಾಟ ರೂಪಿಸಲು ಕಲ್ಕುಣಿಕೆ ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಬುಧವಾರ ಶಾಲೆ ಆವರಣದಲ್ಲಿ ಶಾಲೆ ಎಸ್‌ಡಿಎಂಸಿ ಸದಸ್ಯರು, ಪಾಲಕರು, ಹಳೆ ವಿದ್ಯಾರ್ಥಿಗಳು ಸಭೆ ಸೇರಿ ಸರ್ಕಾರಿ ಶಾಲೆ ಉಳಿಯುವಿಗಾಗಿ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯಲು ಗ್ರಾಮಸ್ಥರನ್ನು ಸೇರಿಸಿ ಒಟ್ಟಾಗಿ ಹೋರಾಟ ರೂಪಿಸಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು.
ಶಾಲೆಯ ಹಳೆಯ ವಿದ್ಯಾರ್ಥಿ ಮತ್ತು ನಿವೃತ್ತ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಮಾತನಾಡಿ, ಸುಮಾರು 80 ವರ್ಷದ ಹಳೆಯ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಈಗಲೂ ಉತ್ತಮವಾಗಿ ಶಾಲೆ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆ ತೆರವು ಮಾಡಬಾರದು. ಇದರಿಂದ ಇಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಈ ಶಾಲೆಯನ್ನು ಎಲ್ಲರೂ ಸೇರಿ ಉಳಿಸಬೇಕಾಗಿದೆ ಎಂದರು.
ವಕೀಲ ಮಹೇಶ್ ಮಾತನಾಡಿ, ಸರ್ಕಾರಿ ಶಾಲೆಯನ್ನು ಉಳಿಸಬೇಕಾದ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಇಂದು ಸರ್ಕಾರವೇ ಶಾಲೆ ಕೆಡವಲು ಮಂದಾಗಿರುವುದು ದುರದೃಷ್ಟಕರ ಎಂದರು. ನಿವೃತ್ತ ಶಿಕ್ಷಕ ಎಚ್.ಡಿ.ಬೀರೇಶ್ವರ್ ಮಾತನಾಡಿ, ಸರ್ಕಾರ ಹೊಸ ಶಾಲೆ ಕಟ್ಟುವ ಬದಲು ಇರುವ ಶಾಲೆಗಳನ್ನು ಮುಚ್ಚುತ್ತಿದೆ. ಇರುವ ಶಾಲೆಯನ್ನಾದರೂ ಉಳಿಸುವ ಕೆಲಸ ಮಾಡಬೇಕು. ಕಲ್ಕುಣಿಕೆ ಶಾಲೆಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಹೋರಾಟ ಸಮಿತಿಗೆ ವಕೀಲ ಮಹೇಶ್, ಬಸವರಾಜು ಕಲ್ಕುಣಿಕೆ ಸೇರಿದಂತೆ ಆರು ಜನರನ್ನು ಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಮುಂದಿನ ಹೋರಾಟ ರೂಪಿಸಲು ಫೆ.21 ರಂದು ಸಭೆ ಕೆರೆಯಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷ ಶೇಖರ್, ಹಳೆ ವಿದ್ಯಾರ್ಥಿಗಳಾದ ವಕೀಲ ರವಿ, ಸುರೇಶ, ಕೆಂಡಗಣ್ಯ, ಕಾಂತರಾಜು, ಜಯಕುಮಾರ್, ವೆಂಕಟೇಶ, ಹುಚ್ಚಪ್ಪ, ಕುಮಾರ, ಸೋಮಶೇಖರ್ ಇದ್ದರು.