ನಗರದ ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅವರು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ಎಸ್.ಯುಕೇಶ್ ಕುಮಾರ್, ಕೆ.ಎಚ್.ರವಿ, ಮಂಟೇಸ್ವಾಮಿ, ಕುರುಬೂರು ಶಾಂತಕುಮಾರ್ ಇನ್ನಿತರರಿದ್ದರು.
- ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಸಭೆ
- ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣವನ್ನು 15 ದಿನಗಳ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ
ಮೈಸೂರು: ಕಬ್ಬು ಕಟಾವಿಗೆ ಪ್ರತಿ ರೈತರಿಗೂ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆಗಾರರು ಹಾಗೂ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಸಭೆಯಲ್ಲಿ ಮಾತನಾಡಿದರು.
ಇಂತಹ ದಿನ ಇಂತಹ ರೈತರ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡಬೇಕು ಎಂದು ತಹಸೀಲ್ದಾರ್ ಕಚೇರಿಯಿಂದ ಅಧಿಕೃತವಾದ ಆದೇಶ ಹೊರಡಿಸಲಾಗುತ್ತದೆ. ಇದರ ಅನ್ವಯವೇ ಕಬ್ಬನ್ನು ಕಟಾವು ಮಾಡಬೇಕು. ಇದರಿಂದಾಗಿ ಕಬ್ಬು ಕಟಾವು ಮಾಡುವುದು ಒಂದು ಶಿಸ್ತಿಗೆ ಬರುತ್ತದೆ.
ಕಟಾವು ಮಾಡುವ ಕಾರ್ಮಿಕರು ಒಂದು ದಿನ ಒಂದು ಜಮೀನಿನಲ್ಲಿ ಕಟಾವು ಮಾಡಿ, ಅಲ್ಲಿ ಅರ್ಧ ಕೆಲಸವನ್ನು ಮಾಡಿ, ಮತ್ತೆ ಮಾರನೇಯ ದಿನ ಮತ್ತೊಂದು ಜಮೀನಿಗೆ ಹೋಗುವುದಕ್ಕೂ ತಡೆ ಬೀಳುತ್ತದೆ. ಯಾರ ಜಮೀನಿನಲ್ಲಿ ಯಾವ ದಿನಾಂಕದಂದು ಕಬ್ಬು ಕಟಾವು ಆಗುತ್ತದೆ ಎನ್ನುವ ಮಾಹಿತಿಯೂ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ, ನಾಡ ಕಚೇರಿಗಳ ಮಾಹಿತಿ ಫಲಕದಲ್ಲಿ ಹಾಕಲಾಗುತ್ತದೆ. ಜತೆಗೆ ರೈತ ಸಂಘಟನೆಗಳಿಗೂ ನೀಡಲಾಗುತ್ತದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ರೈತರು, ಈ ಮಾಹಿತಿಯನ್ನು ನಮ್ಮ-ನಮ್ಮ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಪ್ರಚುರಪಡಿಸಿಕೊಳ್ಳುತ್ತವೆ ಎಂದರು.
ವಿಶೇಷ ಸಂದರ್ಭಗಳಲ್ಲಿ ಅಂದರೆ ಕಬ್ಬು ಕಟಾವಿನ ಹಂತಕ್ಕೆ ಬರಲು ಒಂದೆರಡು ತಿಂಗಳು ಬೇಕಾಗಿದ್ದು, ಅಂತಹ ಸಮಯದಲ್ಲಿ ರೋಗಬಾಧೆ, ಹುಳುವಿನ ಬಾಧೆ ಉಂಟಾದರೆ, ಅಂತಹ ರೈತರ ಕಬ್ಬನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪರಿಶೀಲನೆ ನಡೆಸಿ, ಬಳಿಕ ಸಕ್ಕರೆ ಕಾರ್ಖಾನೆಗೆ ಕಬ್ಬು ತೆಗೆದುಕೊಳ್ಳುವಂತೆ ಅನುಮತಿ ನೀಡುತ್ತಾರೆ.
ಅಂತಹವರ ಕಬ್ಬನ್ನು ಮಾತ್ರ ಕಾರ್ಖಾನೆ ತೆಗೆದುಕೊಳ್ಳಬೇಕು. ತಾನೇ ಸ್ವಯಂ ಪ್ರೇರಿತವಾಗಿ ಕಬ್ಬನ್ನು ಕಟಾವು ಮಾಡಿಸಬಾರದು. 12 ತಿಂಗಳಿಗೆ ಸರಿಯಾಗಿ ಕಬ್ಬನ್ನು ಕಟಾವು ಮಾಡಿಸುವುದಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದರು.
ಪ್ರತಿ ಟನ್ ಕಬ್ಬಿಗೆ ಸರ್ಕಾರ ನಿಗದಿ ಮಾಡಿರುವ ಹೆಚ್ಚುವರಿ ಹಣವನ್ನು 15 ದಿನಗಳ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರ್ಕಾರ, ಕಾರ್ಖಾನೆಯಿಂದ ರೈತರಿಗೆ ಹೆಚ್ಚುವರಿ ಹಣ ರೈತರು ಬೆಳೆದ ಕಬ್ಬಿಗೆ ಹೆಚ್ಚುವರಿಯಾಗಿ ಸರ್ಕಾರ 50 ರೂ. ಹಾಗೂ ಕಬ್ಬು ಸರಬರಾಜು ಮಾಡಿಸಿಕೊಂಡಿರುವ ಸಕ್ಕರೆ ಕಾರ್ಖಾನೆಯೂ 50 ರೂ. ನೀಡಬೇಕು.
ಇದರ ಅನ್ವಯ ಸರ್ಕಾರವು ಆದ್ಯತೆ ಮೇರೆಗೆ ಜಿಲ್ಲೆಗೆ ಮುಂಚಿತವಾಗಿಯೇ ಹಣವನ್ನು ಬಿಡುಗಡೆ ಮಾಡುತ್ತಿದೆ. ಸರ್ಕಾರದ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಣವು ಬರಲು ವಾರದ ಮೇಲೆಗುತ್ತದೆ. ನಂತರ ಇಲ್ಲಿ ಪ್ರಕ್ರಿಯೆಗಳು ಮುಗಿಯಲು ಒಂದು ವಾರಕ್ಕೂ ಹೆಚ್ಚು ಸಮಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 15 ದಿನಗಳ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ ಎಂದು ನೀಡಿದರು.
ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯೂ ಇದೇ ಸಮಯದಲ್ಲೇ ತಾನು ನೀಡಬೇಕಾಗಿರುವ 50 ರೂ. ರೈತರ ಖಾತೆಗೆ ಜಮೆ ಮಾಡಬೇಕು. ಯಾವುದೇ ಕಾರಣಕ್ಕೂ ನೆಪ ಹೇಳಬಾರದು. ಇದು ಸರ್ಕಾರದ ಆದೇಶ. ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಇದನ್ನು ಮೀರಿ ರೈತರ ಬಾಕಿ ಹಣವನ್ನು ಪಾವತಿ ಮಾಡಲು ವಿಫಲರಾದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ದಂಡ ವಿಧಿಸಿ, ಬೇರೆ ರೀತಿಯ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳದಲ್ಲೇ ಕಬ್ಬು ಇಳುವರಿ ಪರೀಕ್ಷೆ
ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ಇಳುವರಿ ಪರೀಕ್ಷೆಯಲ್ಲಿ ವಂಚನೆ ಮಾಡಲಾಗುತ್ತಿದೆಂದು ರೈತರು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ವರ್ಷವೂ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವತಿಯಿಂದ ಕಬ್ಬಿನ ಇಳುವರಿಯ ಪರೀಕ್ಷೆ ಮಾಡಿಸಲಾಗಿತ್ತು. ಅವರು ಯಾವುದೇ ವ್ಯತ್ಯಾಸ ಇಲ್ಲ ಎಂದು ವರದಿ ಕೊಟ್ಟಿದ್ದರು.
ಆದರೆ, ರೈತರ ಅನುಮಾನವೂ ದೂರವಾಗದ ಹಿನ್ನೆಲೆಯಲ್ಲಿ ಈ ಸಲ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಹೊತ್ತಿಗೆ ತಾವೇ ಖುದ್ದಾಗಿ ಅನಿರೀಕ್ಷಿತವಾಗಿ ಭೇಟಿ ನೀಡಿ, ಸ್ಥಳದಲ್ಲೇ ಇಳುವರಿ ಪರೀಕ್ಷೆ ಮಾಡಲಾಗುವುದು. ನಮ್ಮ ಜತೆಗೆ ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರು ಇರುತ್ತಾರೆ. ಅವರ ಸಮ್ಮುಖದಲ್ಲೇ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯವರಿಂದ ಪರೀಕ್ಷಾ ಉಪಕರಣ ತರಿಸಿ ಪರೀಕ್ಷೆ ಮಾಡಲಾಗುತ್ತದೆ. ಇದನ್ನು ಒಂದೇ ಸಲಕ್ಕೆ ಮುಗಿಸದೆ ಎರಡೂ-ಮೂರು ಬಾರಿ ಪರೀಕ್ಷೆ ನಡೆಸಿ, ಅಮೇಲೆ ಒಂದು ನಿರ್ಣಯಕ್ಕೆ ಬರಲಾಗುತ್ತದೆ ಎಂದು ತಿಳಿಸಿದರು.
ಪ್ರವೇಶ ದ್ವಾರದಲ್ಲೇ ತೂಕದ ಯಂತ್ರ ಅಳವಡಿಕೆಗೆ ಕ್ರಮ ವಹಿಸಿ
ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬನ್ನು ತೂಕ ಮಾಡುವ ಯಂತ್ರವೂ ಫ್ಯಾಕ್ಟರಿಯ ಹಿಂದೆ ಇದೆ. ಇದರಿಂದ ತೂಕದಲ್ಲಿ ವ್ಯತ್ಯಾಸವಾಗುತ್ತದೆ ಎಂದು ರೈತರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಯಂತ್ರವನ್ನು ಪ್ರವೇಶ ದ್ವಾರದ ಸಮೀಪವೇ ಸ್ಥಾಪನೆ ಮಾಡಲು ಇರುವ ಸಾಧಕ-ಬಾಧಕ ನೋಡಿಕೊಂಡು ಕಾರ್ಖಾನೆಯೂ ಮುಂದುವರಿಯಬೇಕು ಎಂದ ಜಿಲ್ಲಾಧಿಕಾರಿ ತಿಳಿಸಿದರು.
ಕಬ್ಬನ್ನು ತೂಕ ಮಾಡಲು ಮೂರು ದಿನ, ನಾಲ್ಕು ದಿನವಾಗುತ್ತದೆ ಎಂದು ರೈತರು ಆರೋಪಿಸುತ್ತಾರೆ. ಆದ್ದರಿಂದ ಕಬ್ಬು ತುಂಬಿದ ವಾಹನ ಕಾರ್ಖಾನೆಯ ಪ್ರವೇಶ ದ್ವಾರಕ್ಕೆ ಆಗಮಿಸಿದ ಸಮಯದಲ್ಲಿ ಒಂದು ಪ್ರವೇಶ ಚೀಟಿಯನ್ನು ಕೊಡಿ, ಬಳಿಕ ಯಾವಾಗ ತೂಕ ಮಾಡುತ್ತೀರೂ ಆಗ ಒಂದು ಚೀಟಿ ನೀಡಿ. ಈ ಕೆಲಸವನ್ನು ಮಾಡಲು ನಿಮ್ಮಲ್ಲಿ ಕಾರ್ಯನಿರ್ವಹಣೆ ಮಾಡುವ ಸಾಫ್ಟ್‌ವೇರ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಆಗ ಪಕ್ಕ ಮಾಹಿತಿಯೂ ದೊರೆಯುತ್ತದೆ. 24 ಗಂಟೆಗಳ ಬಳಿಕ ತೂಕ ಮಾಡಿದರೆ ಕಾರ್ಖಾನೆಯ ವತಿಯಿಂದ ಪ್ರೋತ್ಸಾಹದಾಯಕ ಹಣ ಎಂದು ಇಂತಿಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ ಎಂದರು.
ರೈತರ ಬೇಡಿಕೆಗಳು ಏನು?
ಇದಕ್ಕೂ ಮೊದಲು ಮಾತನಾಡಿದ ರೈತ ಮುಖಂಡರು ಜಿಲ್ಲಾಧಿಕಾರಿಗೆ ಹಲವಾರು ಬೇಡಿಕೆ ಸಲ್ಲಿಸಿದರು. ಉತ್ತರ ಕರ್ನಾಟಕದಲ್ಲಿ ಕಬ್ಬಿನ ಇಳುವರಿಯನ್ನು 10.15ರಷ್ಟು ನೀಡಲಾಗುತ್ತದೆ. ನಮ್ಮಲ್ಲಿ ಮಾತ್ರ 9.5ರಷ್ಟನ್ನು ನೀಡಲಾಗುತ್ತದೆ. ಈ ತಾರತಮ್ಯ ತಪ್ಪಿಸಬೇಕು. ಸಕ್ಕರೆ ಕಾರ್ಖಾನೆಯೂ ಕಬ್ಬು ಬೆಳೆಗಾರರಿಗೆ ನೀಡುವ ಅಣುಗೊಬ್ಬರ, ಸೂಕ್ಷ್ಮ ಪೋಷಕಾಂಶಗಳಿಗೆ ವಿಧಿಸುವ ಬಡ್ಡಿ ರದ್ದುಪಡಿಸಬೇಕು. ಕಾರ್ಖಾನೆ ಜತೆಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಯೋಜನೆ ಜಾರಿಯಾಗಬೇಕು. ಸಕಾಲದಲ್ಲಿ ಕಬ್ಬನ್ನು ಕಟಾವು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜು, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕೆರೆಹುಂಡಿ ರಾಜಣ್ಣ, ವಳಗೇರ ಗಣೇಶ, ದೇವನೂರು ನಾಗೇಂದ್ರ ಇನ್ನಿತರರಿದ್ದರು.