ಅರಮನೆಯ ಗೋಡೆಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕ. Dasara preparations gather pace at Mysore Palace.
ಮೈಸೂರು

ದಸರಾ ದೀಪಾಲಂಕಾರಕ್ಕೆ ಸಕಲ ಸಿದ್ಧತೆ

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಅರ್ಚನಾ ಮಾಹಿತಿ

ನಾಡಹಬ್ಬ ಮೈಸೂರು ದಸರಾ-2026ರ ಹಿನ್ನೆಲೆಯಲ್ಲಿ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಕಾಮಗಾರಿಗಳು ಹಾಗೂ ವಿದ್ಯುತ್ ವ್ಯವಸ್ಥೆಗಳ ಸಿದ್ಧತೆಗಳನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವತಿಯಿಂದ ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್.ಅರ್ಚನಾ ತಿಳಿಸಿದ್ದಾರೆ.

ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ನಗರಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಸರಾ ಪ್ರಮುಖ ಸ್ಥಳಗಳು, ರಸ್ತೆಗಳು, ವೃತ್ತಗಳು ಹಾಗೂ ಪ್ರಮುಖ ಕಟ್ಟಡಗಳಲ್ಲಿ ಕೈಗೊಳ್ಳಲಾಗುತ್ತಿರುವ ವಿದ್ಯುತ್ ದೀಪಾಲಂಕಾರಕ್ಕೆ ಅಗತ್ಯ ವಿದ್ಯುತ್ ಸಂಪರ್ಕ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೀಪಾಲಂಕಾರಕ್ಕಾಗಿ ಅಳವಡಿಸಲಾಗಿರುವ ವಿದ್ಯುತ್ ಕೇಬಲ್‌ಗಳು, ಕಂಟ್ರೋಲ್ ಪ್ಯಾನೆಲ್‌ಗಳು, ಡಿಸ್ಟ್ರಿಬ್ಯೂಷನ್ ಬಾಕ್ಸ್‌ಗಳು ಹಾಗೂ ಇತರ ವಿದ್ಯುತ್ ಉಪಕರಣಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ಸಡಿಲ ಸಂಪರ್ಕ, ತೆರೆದ ತಂತಿ ಅಥವಾ ಅಪಾಯಕಾರಿ ವಿದ್ಯುತ್ ವ್ಯವಸ್ಥೆ ಕಂಡುಬಂದಲ್ಲಿ ತಕ್ಷಣವೇ ಸರಿಪಡಿಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.

ದಸರಾ ಅವಧಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರಮುಖ ವಿದ್ಯುತ್ ಉಪಕೇಂದ್ರಗಳು, ಫೀಡರ್‌ಗಳು ಮತ್ತು ವಿದ್ಯುತ್ ಮಾರ್ಗಗಳ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಲು ಹೆಚ್ಚುವರಿ ಸಿಬ್ಬಂದಿ, ವಾಹನಗಳು ಹಾಗೂ ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯುತ್ ದೀಪಾಲಂಕಾರ ಕಾಮಗಾರಿಗಳ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರಿಗೆ ಅಪಾಯ ಉಂಟಾಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಮಳೆ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ವಿದ್ಯುತ್ ಸುರಕ್ಷತೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ದಸರಾ ವಿದ್ಯುತ್ ದೀಪಾಲಂಕಾರವು ಮೈಸೂರಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತೆ ಹಾಗೂ ಯಾವುದೇ ವಿದ್ಯುತ್ ಅವಘಡ ಉಂಟಾಗದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದಸರಾ ದೀಪಾಲಂಕಾರವನ್ನು ಸುರಕ್ಷಿತವಾಗಿ ಮತ್ತು ಯಶಸ್ವಿಯಾಗಿಸಲು ಸಾರ್ವಜನಿಕರು ಸೆಸ್ಕ್‌ನೊಂದಿಗೆ ಸಹಕರಿಸಬೇಕು. ವಿದ್ಯುತ್ ದೀಪಾಲಂಕಾರದ ಕಂಬಗಳು, ಕಲಾಕೃತಿಗಳು ಹಾಗೂ ವಿದ್ಯುತ್ ಉಪಕರಣಗಳನ್ನು ಮುಟ್ಟದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ವಿದ್ಯುತ್ ಅವಘಡ ಅಥವಾ ಅಪಾಯಕಾರಿ ಪರಿಸ್ಥಿತಿ ಕಂಡುಬಂದಲ್ಲಿ ತಕ್ಷಣ ಸೆಸ್ಕ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕೋರಿದ್ದಾರೆ.