- ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
- ಮರಗಳನ್ನು ಕತ್ತರಿಸಿಲ್ಲ, ಜಾಗ ಸ್ವಚ್ಛಗೊಳಿಸಲಾಗಿದೆ ಅಷ್ಟೆ
ದಸರಾದಲ್ಲಿ ಕಂಬಳವನ್ನು ಪ್ರಾಯೋಗಿಕವಾಗಿ ಆಯೋಜಿಸಬೇಕು ಎಂದು ಚಿಂತಿಸಲಾಗಿದೆಯೇ ಹೊರೆತು, ಅಂತಿಮ ತೀರ್ಮಾನ ಆಗಿಲ್ಲ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ಸಾರ್ವಜನಿಕ ವಲಯದಲ್ಲಿ ಎದ್ದಿರುವ ಚರ್ಚೆ ಹಾಗೂ ವಿರೋಧದ ಕುರಿತು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಂಬಳ ನಮ್ಮ ರಾಜ್ಯದ ಹೆಮ್ಮೆಯ ಸಾಂಸ್ಕೃತಿಕ ಕ್ರೀಡೆ. ಮೈಸೂರಿನ ಜನರೂ ಇದನ್ನು ನೋಡಲಿ ಎಂಬ ಉದ್ದೇಶದಿಂದ ಈ ವರ್ಷಕ್ಕೆ ಮಾತ್ರ ಪ್ರಾಯೋಗಿಕವಾಗಿ ಆಯೋಜಿಸಲು ಚಿಂತಿಸಲಾಗಿದೆ. ಮಾಡಲೇಬೇಕೆಂಬ ತೀರ್ಮಾನ ಆಗಿಲ್ಲ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಂಬಳಕ್ಕಾಗಿ ನೂರಾರು ಮರಗಳನ್ನು ಕತ್ತರಿಸಿಲ್ಲ, ಜಾಗ ಸ್ವಚ್ಛಗೊಳಿಸಲಾಗಿದೆ. ಒಂದು ವೇಳೆ ಆಯೋಜನೆಗೆ ಅನುಮತಿ ಸಿಕ್ಕರೆ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಶೀಘ್ರದಲ್ಲೇ ಸಂಪುಟ ವಿಸ್ತರಣೆ:
ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ಎಂಎಲ್‌ಸಿ ಮತ್ತು ರಾಜ್ಯಸಭಾ ಚುನಾವಣೆಗಳಿದ್ದ ಕಾರಣ ಪ್ರಕ್ರಿಯೆ ತಡವಾಗಿದೆ. ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿಗಳು ಹಾಗೂ ಪ್ರಮುಖ ನಾಯಕರು ದೆಹಲಿಗೆ ತೆರಳುತ್ತಿದ್ದು, ಶೀಘ್ರದಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ಮಂತ್ರಿ ಸ್ಥಾನಕ್ಕಾಗಿ 500 ಕೋಟಿ ರೂ.ಸೂಟ್‌ಕೇಸ್ ನೀಡಬೇಕೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇಂತಹ ಆರೋಪಗಳು ವಿಪಕ್ಷಗಳ ಸೃಷ್ಟಿ. ನಮ್ಮ ಪಕ್ಷದಲ್ಲಿ ದಕ್ಷತೆ ಮತ್ತು ಪಕ್ಷನಿಷ್ಠೆ ಆಧಾರದ ಮೇಲಷ್ಟೇ ಸ್ಥಾನ ನೀಡಲಾಗುತ್ತದೆ. ಯಾರು ದುಡ್ಡು ಕೊಟ್ಟು ಮಂತ್ರಿಗಳಾಗುತ್ತಾರೋ ಅವರ ಸರ್ಕಾರ ಸರಿಯಾಗಿ ನಡೆಯುವುದಿಲ್ಲ. ಇದು ವಿಪಕ್ಷಗಳ ಸಂಸ್ಕೃತಿ ಎಂದರು.