ನಾಡಹಬ್ಬ ದಸರಾ ಉತ್ಸವದಲ್ಲಿ ಸತತ ಆರು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತು ಮೆರೆದ ಅಭಿಮನ್ಯು ಆನೆಯನ್ನು ಈ ಬಾರಿಯ ದಸರಾ ಉತ್ಸವಕ್ಕೆ ವಯಸ್ಸಿನ ಕಾರಣಕೋಸ್ಕರ ಕೈಬಿಟ್ಟು 14 ಅನೆಗಳನ್ನು ಒಳಗೊಂಡ ಗಜಪಡೆಯ ಪಟ್ಟಿಯನ್ನು ಅರಣ್ಯ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದೆ.
ಮೊದಲ ತಂಡದಲ್ಲಿ 9 ಆನೆಗಳು, 2ನೇ ತಂಡದಲ್ಲಿ ಮೂರು ಆನೆಗಳು ಅರಮನೆಗೆ ಆಗಮಿಸಲಿದೆ. 2 ಆನೆಗಳನ್ನು ಮೀಸಲು ಆನೆಗ ಳಾಗಿ ಆಯ್ಕೆ ಮಾಡಲಾಗಿದೆ. ಅರ್ಜುನ ಆನೆಯ ನಿವೃತ್ತಿಯ ನಂತರ 2020ರಲ್ಲಿ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊ ಂಡಿತ್ತು. 2025ರವರೆಗೆ ಅಭಿಮನ್ಯು ಯಶಸ್ವಿಯಾಗಿ ಅಂಬಾರಿಯನ್ನು ಹೊತ್ತು ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಕಾಡಾನೆಗಳನ್ನು ಸೆರೆಹಿಡಿಯುವ ಮತ್ತು ಕಾಡಾನೆಗಳ ಹಾವಳಿ ತಡೆಯುವ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿರುವ ಅತ್ಯಂತ ಅನುಭವಿ ಮತ್ತು ಯಶಸ್ವಿ ಪಳಗಿದ ಆನೆ ಇದಾಗಿದೆ. ಕೇವಲ ಕಾಡಾನೆ ಕಾರ್ಯಾಚರಣೆ ಮಾತ್ರವಲ್ಲದೆ 750 ಕೆ.ಜಿ. ತೂಕದ ಅಂಬಾರಿ ಹೊರುವುದರಲ್ಲೂ ಸೈ ಅನ್ನಿಸಿಕೊಂಡಿದ್ದ. ಈ ಬಾರಿಯೂ ಅಂಬಾರಿ ಹೊರುವ ಎಲ್ಲ ಸಾಮರ್ಥ್ಯ ಅಭಿಮನ್ಯುವಿಗೆ ಇದ್ದರೂ ವಯಸ್ಸಿ ಕಾರಣಕ್ಕೆ ಈ ಅವಕಾಶವನ್ನು ಕಳೆದುಕೊಂಡಿದ್ದಾನೆ.
ಗಜಪಡೆ ಪಟ್ಟಿ ಬಿಡುಗಡೆ: ಬೆಂಗಳೂರಿನಲ್ಲಿ ಮಂಗಳವಾರ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ದಸರಾ ಗಜಪಡೆಯ ಪಟ್ಟಿ ಬಿಡುಗಡೆ ಮಾಡಿದರು. ಆ. 26ರಂದು ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ ಮತ್ತು ಲಕ್ಷ್ಮೀ, ಮತ್ತಿಗೋಡು ಶಿಬಿರದ ಏಕಲವ್ಯ ಆಗಮಿಸಲಿದೆ. 2ನೇ ತಂಡದಲ್ಲಿ ನಾಗರಹೊಳೆಯ ದೊಡ್ಡಹರವೆ ಶಿಬಿರದ ರೂಪ, ಬಂಡೀಪುರದ ರಾಮಪುರ ಶಿಬಿರದ ಶ್ರೀಕಂಠ ಆಗಮಿಸಲಿದೆ. ಮೀಸಲು ಆನೆಗಳಾಗಿ ಮತ್ತಿಗೋಡಿನ ಭೀಮ, ದುಬಾರೆಯ ಹರ್ಷ ಆನೆಗಳನ್ನು ಆಯ್ಕೆ ಮಾಡಲಾಗಿದೆ.
ಮುಂದಿನ ಅಂಬಾರಿ ಆನೆ ಯಾವುದು?
ಅಂಬಾರಿ ಆನೆಯಾಗಿ ಅಭಿಮನ್ಯುವನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಈ ಬಾರಿ ಯಾವ ಆನೆಯನ್ನು ಅಂಬಾರಿ ಆನೆಯಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಮೂಡಿದೆ.
ಅರಣ್ಯ ಇಲಾಖೆಗಳ ಮೂಲಗಳ ಪ್ರಕಾರ ಧನಂಜಯ, ಮಹೇಂದ್ರ, ಸುಗ್ರೀವ ಹಾಗೂ ಪ್ರಶಾಂತ ಆನೆಗಳ ಪೈಕಿ ಒಂದನ್ನು ಈ ಬಾರಿ ಅಂಬಾರಿ ಹೊರಲು ಆಯ್ಕೆ ಮಾಡುವ ಸಾಧ್ಯತೆ ಇದೆ. ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ ಆನೆಯು ಸತತ ನಾಲ್ಕು ಬಾರಿ ಅಂಬಾರಿ ಹೊತ್ತಿರುವ ಅನುಭವ ಹೊಂದಿದ್ದಾನೆ. ಅಲ್ಲದೆ, ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ತಾಲೀಮು ಸಂದರ್ಭದಲ್ಲಿ ಹಲವಾರು ಬಾರಿ ಮರದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗಿದ್ದಾನೆ. ಹೀಗಾಗಿ ಈ ಬಾರಿ ಮಹೇಂದ್ರ ಆನೆಯು ಅಂಬಾರಿ ಆನೆಯಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಇದ್ದು, ಮಹೇಂದ್ರ ಅನೆಗೆ ಈಗಿನ್ನೂ 42 ವರ್ಷ. ಮತ್ತೊಂದು ಪ್ರಮುಖ ಆಯ್ಕೆಯಾಗಿ 54 ವರ್ಷದ ಪ್ರಶಾಂತ ಆನೆಯನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಇದು ಅತ್ಯಂತ ಸೌಮ್ಯ ಸ್ವಭಾವದ ಆನೆಯಾಗಿದೆ. ಒಟ್ಟಾರೆ ಅಂಬಾರಿ ಹೊರುವ ಆನೆಯ ಆಯ್ಕೆಯು ತರಬೇತಿ ಅವಧಿಯಲ್ಲಿ ಅವುಗಳು ತೋರುವ ವರ್ತನೆ ಹಾಗೂ ಅದರ ಸಾಮರ್ಥ್ಯವನ್ನು ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಅಭಿಮನ್ಯುವಿನ ಬಳಿಕ ಯಾವ ಆನೆ ಚಿನ್ನದ ಅಂಬಾರಿಯ ಜವಾಬ್ದಾರಿ ಹೊರುತ್ತದೆ ಎಂಬುದು ಈ ಬಾರಿಯ ದಸರಾ ಉತ್ಸವದ ಪ್ರಮುಖ ಕುತೂಹಲವಾಗಿದೆ.