ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಶ್ರೀ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದರು. ಡಾ.ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ದೇವಗಳ್ಳಿ ಸೋಮಶೇಖರ್, ಜೀವನಹಳ್ಳಿ ವೆಂಕಟೇಶ್ ಹಾಗೂ ಇತರರು ಇದ್ದರು. 
ಮೈಸೂರು

ದಲಿತರು ಸಿಎಂ ಸ್ಥಾನಕ್ಕೆ ಬೇಡುವ ಬದಲು ಹಕ್ಕು ಮಂಡಿಸಬೇಕು : ಸಾಹಿತಿ ಸಿ. ಹರಕುಮಾರ್

ಮೈಸೂರು: ದಲಿತರು ಮುಖ್ಯಮಂತ್ರಿ ಸ್ಥಾನಕೋಸ್ಕರ ಬೇಡುವ ಬದಲು ತಮ್ಮ ಹಕ್ಕನ್ನು ಮಂಡಿಸಿ ಪಡೆಯಬೇಕು ಎಂದು ಸಾಹಿತಿ ಸಿ. ಹರಕುಮಾರ್ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಿದ್ದರಾಮಂ್ಯು ತಮ್ಮ ಹಕ್ಕನ್ನು ಮಂಡಿಸಿ ಮುಖ್ಯಮಂತ್ರಿ ಸ್ಥಾನ ಪಡೆದರು. ಅವರ ಬೇಡಿಕೆಗೆ ಸ್ಪಂದಿಸದೆ ಇದ್ದರೆ ಪಕ್ಷ ತ್ಯಜಿಸುವುದಾಗಿ ಹೇಳಿದ್ದರು. ಇಂತಹ ದಿಟ್ಟ ನಡೆಯನ್ನು ದಲಿತ ಮುಖಂಡರು ಸಹ ಕೈಗೊಳ್ಳಬೇಕು. ಸಚಿವ ಸತೀಶ್ ಜಾರಕಿಹೊಳಿ 2028ಕ್ಕೆ ಮುಖ್ಯಮಂತ್ರಿ ಹುದ್ದೆ ಕೇಳುವುದಾಗಿ ಹೇಳಿದ್ದಾರೆ. ಆದರೆ ಪ.ಜಾತಿಂು ಮುಖಂಡರು ಆ ರೀತಿ ಹಕ್ಕು ಮಂಡಿಸುತ್ತಿಲ್ಲ ಎಂದರು.
ಶ್ರೀ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ದಲಿತರ ಮುಂದಿನ ನಡೆ ಅಧಿಕಾರದ ಕಡೆ ಇರಬೇಕು. ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಮುನ್ನ ನಾನು ದಲಿತ ಸಂಘರ್ಷ ಸಮಿತಿಯ ನಾಯಕರಿಗೆ ಷರತ್ತುಗಳನ್ನು ವಿಧಿಸಿ ಬೆಂಬಲ ಕೊಡುವಂತೆ ಕಿವಿಮಾತು ಹೇಳಿದ್ದೆ. ಆದರೆ, ಮುಖಂಡರು ಈ ಬಾರಿ ಸಮುದಾಯಕ್ಕೆ ಅಧಿಕಾರ ಸಿಗಲಿದೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದರು. ದಲಿತ ಸಂಘಟನೆಗಳು ರಾಜಕೀಯ ನಿರ್ಧಾರ ತೆಗೆದುಕೊಳ್ಳುವಾಗ ತಮ್ಮ ಶಾಶ್ವತವಾದ ಸೋಲನ್ನು ಒಪ್ಪಿಕೊಂಡಿದೆ. ಹಾಗಾಗಿ ನಮ್ಮ ರಾಜಕಾರಣದ ಗುರಿ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಹಿಂದದ ಗಟ್ಟಿಯಾದ ಬೇರು ದಲಿತರು. ಆದರೆ, ಅಹಿಂದದಲ್ಲಿ ದಲಿತರ ಪಾತ್ರ ಗುಲಾಮಗಿರಿ. ಹೀಗಾಗಿ ದಲಿತರ ರಾಜಕಾರಣದ ವಿಫಲತೆಗೆ ಕಾರಣ ಗುಲಾಮಗಿರಿ. ಒಂದು ಸಮುದಾಯದವರು 12 ಬಾರಿ, ಇನ್ನೊಂದು ಸಮುದಾಯದವರು 7 ಬಾರಿ, ಸಣ್ಣ ಸಮುದಾಯದವರೂ 1 ರಿಂದ 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ದೇಶದ ಪ್ರಜಾಪ್ರಭುತ್ವದ ತಂದೆಯಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ವಾರಸುದಾರರಾದ ನಾವು ಬೇಡುವ ಸಮುದಾಯವಾಗಿದ್ದೇವೆ ಎಂದು ವಿಷಾದಿಸಿದರು.
ಹಕ್ಕು ಮತ್ತು ಅಧಿಕಾರಗಳು ನಾವು ಕೂತ ಕಡೆ ಬರುವುದಿಲ್ಲ. ಬೇಡಿದರೆ ಯಾರು ಕೊಡುವುದಿಲ್ಲ ಹಾಗೂ ಅವುಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಮ್ಮ ಹಕ್ಕು ಅಧಿಕಾರಗಳನ್ನು ಹೋರಾಟ ಮಾಡಿಕೊಂಡೇ ಪಡೆದುಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಆದರೆ ಅಂಬೇಡ್ಕರ್ ಅವರು ಹೇಳಿದ್ದೇನು, ನಾವು ಮಾಡಿದ್ದೇನುಎಂಬುದರ ಬಗ್ಗೆ ನಾವು ಚಿಂತನೆ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಡಾ.ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ದಸಂಸ ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ಕಾರ್ಯಕಾರಿ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ, ಜಿಲ್ಲಾ ಸಂಚಾಲಕ ಭುಗತಹಳ್ಳಿ ಕೆ.ಮಣಿಯಯ್ಯ ಹಾಗೂ ಇತರರು ಇದ್ದರು.