ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
ದಲಿತ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಶ್ರೀ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ದಲಿತರು ಪ್ರಮುಖ ಕಾರಣ. ಆದರೆ, ಇದೀಗ ಕಾಂಗ್ರೆಸ್‌ನಿಂದ ದಲಿತರನ್ನು ಕಡೆಗಣಿಸುವ ಕೆಲಸ ಆಗುತ್ತಿದೆ. ಬಸವಲಿಂಗಪ್ಪ, ಶ್ರೀನಿವಾಸ ಪ್ರಸಾದ್, ಮಹದೇವಪ್ಪ ಸೇರಿದಂತೆ ವಿವಿಧ ದಲಿತ ನಾಯಕರು ಸಚಿವರಾಗಿದ್ದಾರೆ. ಆದರೆ, ದಲಿತರು ಮುಖ್ಯಮಂತ್ರಿ ಆಗಲಿಲ್ಲ. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಮಹದೇವಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ದಲಿತರು ಕಾಂಗ್ರೆಸ್‌ಗೆ ಶೇ.95 ರಷ್ಟು ಮತ ನೀಡಿದ್ದಾರೆ. ಅಹಿಂದದಲ್ಲಿ ಅಲ್ಪ ಸಂಖ್ಯಾತರು, ದಲಿತರು ಇದ್ದಾರೆ. ಸಿದ್ದರಾಮಯ್ಯ ಅವರನ್ನು ಸಹ ನಮ್ಮ ನಾಯಕ ಅಂತ ಒಪ್ಪಿಕೊಂಡ ಸಮುದಾಯ ನಮ್ಮದು ಎಂದರು.
ಜಾತಿ ಆಧಾರದ ಮೇಲೆ ಸಿಎಂ ಸ್ಥಾನ ಬೇಡ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಕನಿಷ್ಠ ನಮ್ಮ ಸಮುದಾಯಕ್ಕೆ 4 ರಿಂದ 5 ಮಂತ್ರಿ ಸ್ಥಾನವಾದರೂ ಕೊಡಬೇಕಿತ್ತು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಭಾಗದಲ್ಲಿ ನಮ್ಮ ನೋವನ್ನು ಯಾರಿಗೆ ಹೇಳಬೇಕು, ಈ ಬಗ್ಗೆ ಸಮುದಾಯದಲ್ಲಿ ಅಸಮಾಧಾನ ಇದೆ. ಸದ್ಯದಲ್ಲೇ ಸಮುದಾಯದ ಸಭೆ ಮಾಡಿ ಮುಂದಿನ ಚುನಾವಣೆಗೆ ಈಗಿನಿಂದಲೇ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.