ಪಿರಿಯಾಪಟ್ಟಣ ತಾಲೂಕಿನ ಎಂ.ಮಂಟಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಶಾಸಕ ಕೆ.ವೆಂಕಟೇಶ್ ಗುರುವಾರ ಉದ್ಘಾಟಿಸಿದರು. ನಿತಿನ್ ವೆಂಕಟೇಶ್, ಕುಳ್ಳೇಗೌಡ, ಮಹದೇವಮ್ಮ, ಎಂ.ಕೆ.ಮಾದೇಗೌಡ, ಬೀರೇಶ್, ಮಂಜುನಾಥ್ ಇತರರಿದ್ದರು. 
ಮೈಸೂರು

ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡಲಿ

ಎಂ.ರವಿ
ರಾವಂದೂರು: ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಹೈನುಗಾರಿಕೆಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸಲು ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಎಂ.ಮಂಟಿಕೊಪ್ಪಲು ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಹೈನುಗಾರಿಕೆ ಗ್ರಾಮೀಣ ಕುಟುಂಬಗಳ ಜೀವನೋಪಾಯದ ಪ್ರಮುಖ ಆಧಾರವಾಗಿದ್ದು, ರೈತರು ಉತ್ಪಾದಿಸುವ ಹಾಲಿಗೆ ಸೂಕ್ತ ಮಾರುಕಟ್ಟೆ ಹಾಗೂ ನ್ಯಾಯಯುತ ಬೆಲೆ ದೊರಕುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿಯು ರೈತರ ಹಿತಾಸಕ್ತಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಂಘವು ಹಾಲು ಉತ್ಪಾದಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ, ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರೋತ್ಸಾಹಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಹಾಲು ಉತ್ಪಾದಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸದಸ್ಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಪಾರದರ್ಶಕ ಆಡಳಿತ ನಡೆಸುವ ಮೂಲಕ ಸಂಘವನ್ನು ಮಾದರಿ ಸಂಸ್ಥೆಯನ್ನಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಸಂಘದ ಅಧ್ಯಕ್ಷ ಕುಳ್ಳೇಗೌಡ, ಉಪಾಧ್ಯಕ್ಷೆ ಮಹದೇವಮ್ಮ ಕಾರ್ಯದರ್ಶಿ ಎಂ.ಕೆ.ಮಾದೇಗೌಡ, ನಿರ್ದೇಶಕರಾದ ಬೀರೇಶ್, ಮಂಜುನಾಥ್, ಮಂಜುಳಾ, ಬಸವರಾಜು, ಪುಟ್ಟೇಗೌಡ, ಲೋಕೇಶ್, ನಾಗರಾಜು, ಜಯಣ್ಣಗೌಡ, ವಿಸ್ತರಣಾಧಿಕಾರಿ ನಿಶ್ಚಿತ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.