ವಿವಿ 
ಮೈಸೂರು

ದಿನಗೂಲಿ ಉದ್ಯೋಗಿ ಸರಸ್ವತಿಯ ಕೆಲಸ ಕಾಯಂ: ಇದು ಇತರರಿಗೂ ಅನ್ವಯ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಮೂರ್ತಿ ಪಿ.ಸಂಧ್ಯಾರಾವ್ ಅವರಿಂದ ಮಹತ್ವದ ತೀರ್ಪು
  • ಕಾರ್ಮಿಕ ಮುಖಂಡ ಪ್ರಮೋದ್ ಚಿಕ್ಕಮಣ್ಣೂರ್ ಮಾಹಿತಿ
ಮೈಸೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೈಸೂರು ಕಚೇರಿಯಲ್ಲಿ ಕಳೆದ 20 ವರ್ಷಗಳಿಂದ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕೆ.ಎಸ್.ಸರಸ್ವತಿ ಅವರ ಸೇವೆಯನ್ನು 3 ತಿಂಗಳೊಳಗೆ ಕಾಯಂಗೊಳಿಸುವಂತೆ ಔದ್ಯೋಗಿಕ ನ್ಯಾಯಾಧೀಕರಣ ನೀಡಿರುವ ತೀರ್ಪು ಐತಿಹಾಸಿಕವಾಗಿದ್ದು, ಇದು ಇತರರಿಗೂ ಅನ್ವಯಿಸುತ್ತದೆ ಎಂದು ಕಾರ್ಮಿಕ ಮುಖಂಡ ಪ್ರಮೋದ್ ಚಿಕ್ಕಮಣ್ಣೂರ್ ತಿಳಿಸಿದರು.
ನ್ಯಾಯಮೂರ್ತಿ ಪಿ.ಸಂಧ್ಯಾರಾವ್ ಈ ಮಹತ್ವದ ತೀರ್ಪು ನೀಡಿದ್ದಾರೆ. ಇಲ್ಲಿಯವರೆಗೆ ಸುಪ್ರಿಂಕೋರ್ಟ್, ಹೈಕೋರ್ಟ್ ಮಾತ್ರ ದಿನಗೂಲಿ ನೌಕರರ ಸೇವೆ ಸಕ್ರಮ ಕುರಿತಂತೆ ಅನೇಕ ಆದೇಶ ಹೊರಡಿಸಿವೆ. 
ಆದರೆ ಕಾರ್ಮಿಕ ನ್ಯಾಯಾಲಯವೊಂದು ಈ ರೀತಿಯ ತೀರ್ಪು ನೀಡಿರುವುದು ಇದೇ ಪ್ರಥಮ. ಹೀಗಾಗಿ ಇದು ಅನೇಕ ನೊಂದ ನೌಕರರ ಪಾಲಿಗೆ ಆಶಾದಾಯಕವಾಗಿದೆ. ತಮ್ಮ ಸುದೀರ್ಘ  ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು.
ಕೆ.ಎಸ್.ಸರಸ್ವತಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಇವರ ಸೇವೆ ಸಕ್ರಮ ನಿರಾಕರಿಸಿದಾಗ ತಾವು ವಿಷಯ ಕೈಗೆತ್ತಿಕೊಂಡು ಕಾರ್ಮಿಕ ಕಾನೂನು ಬಳಸಿಕೊಂಡು ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಲಾಯಿತು. 
ಇದನ್ನು ಪರಿಶೀಲಿಸಿ ಕಾರ್ಮಿಕ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಿಂದಾಗಿ ಈ ತೀರ್ಪು ಹೊರ ಬಿದ್ದಿದ್ದು, 3 ತಿಂಗಳೊಳಗೆ ಸೇವೆ ಕಾಯಂಗೊಳಿಸದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದರು. 
ಕಾರ್ಮಿಕ ಮುಖಂಡರಾದ ವೆಂಕಟರಾಜು, ಗಂಗಾಧರ ಸ್ವಾಮಿ, ಬಿ.ಎಂ.ಶಿವಸ್ವಾಮಿ, ಮಹಾಲಿಂಗ ಇದ್ದರು.