ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದ ಬೆಳಕು ಸೇವಾ ಸಂಸ್ಥೆಯ ಮಕ್ಕಳಿಗೆ ದಿನನಿತ್ಯ ಪರಿಕರಗಳನ್ನು ಫೈನಾನ್ಸ್ ಸಂಸ್ಥೆಯ ಅಧಿಕಾರಿಗಳು ವಿತರಿಸಿದರು. ಶ್ವೇತಾ, ನಿಂಗರಾಜ ಮಲ್ಲಾಡಿ, ಮನು ಇತರರಿದ್ದಾರೆ.
ಹುಣಸೂರು: ಬಡತನ, ಕೌಟುಂಬಿಕ ಕಲಹದಿಂದ ಬಳಲುತ್ತಿರುವ ಮಕ್ಕಳ ಬಾಳಿಗೆ ಬೆಳಕು ನೀಡುತ್ತಿರುವ ಬೆಳಕು ಸೇವಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಎಚ್‌ಡಿಪಿ ಫೈನಾನ್ಸ್ ಸಂಸ್ಥೆಯ ವ್ಯವಸ್ಥಾಪಕಿ ಶ್ವೇತಾ ಹೇಳಿದರು.
ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಬೆಳಕು ಸೇವಾ ಸಂಸ್ಥೆಗೆ ಬುಧವಾರ ಭೇಟಿ ನೀಡಿದ ಅವರು, ಬಾಲಕಿಯರಿಗೆ ತಟ್ಟೆ, ಲೋಟ, ಸೋಪು, ಬಕೆಟ್‌ಗಳನ್ನು ವಿತರಿಸಿದರು. ಪಾಲಕರೆ ಇಲ್ಲದೆ ಬೀದಿ ಪಾಲದ, ಶಿಕ್ಷಣದಿಂದ ವಂಚಿತರಾದ, ಬಡತನ, ಅನಕ್ಷರತೆಯಿಂದ ಕಂಗಾಲಾಗಿ ಪಾಲಕರು ಕೌಟುಂಬಿಕ ಕಲಹದ ನಡುವೆ ಜೀವನ ನಡೆಸುತ್ತಿರುವ ವೇಳೆ ಅಂತಹವರನ್ನು ಹುಡುಕಿ, ಕರೆತಂದು ಆಶ್ರಯ ನೀಡುತ್ತಿರುವ ಸಂಸ್ಥೆ ಮಾನವೀಯತೆಯನ್ನು ಸಾಕಾರಗೊಳಿಸುವತ್ತ ದುಡಿದಿದೆ. ನಮ್ಮ ಸಂಸ್ಥೆಯ ಸಿಬ್ಬಂದಿ ತಮ್ಮ ವೇತನದ ಉಳಿತಾಯದ ಹಣದಿಂದ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ನೀಡುತ್ತಿದ್ದಾರೆ. ನಮ್ಮ ದುಡಿಮೆಯ ಹಣದ ಅಲ್ಪಭಾಗ ಇಂತಹ ಒಳ್ಳೆಯ ಕಾರ್ಯಕ್ಕೆ ಸದ್ಬಳಕೆಯಾಗಿದ್ದು ನಮಗೂ ಸಮಾಧಾನ ತಂದಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ನಿಂಗರಾಜ ಮಲ್ಲಾಡಿ ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವ ಫೈನಾನ್ಸ್ ಸಂಸ್ಥೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ ಎಂದರು. ಸಂಸ್ಥೆಯ ಮೇಲ್ವಿಚಾರಕ ಮನು, ಸಿಬ್ಬಂದಿ ಹಾಜರಿದ್ದರು.