ನಗರದ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಚಾರಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ, ಡಾ.ದಾಕ್ಷಾಯಿಣಿ, ಡಾ.ಶೋಭಾ ಇದ್ದರು.
- ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಂಸದ
- ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ
- ಇಂತಹ ಘಟನೆಗಳಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ
- ಪ್ರವಾಸಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಭದ್ರತೆ ನೀಡಬೇಕು
ಮೈಸೂರು: ಸಿಲಿಂಡರ್ ಸ್ಫೋಟ ಘಟನೆ ಕಾನೂನು ಸುವ್ಯವಸ್ಥೆ ವಿಫಲತೆಯಲ್ಲ. ಇದು ಒಂದು ಅಪಘಾತವಷ್ಟೇ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದರು.
ಕೆ ಆರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ನೀಡವ ಅವಕಾಶವಿದೆ. ಆದರೆ, ಈ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ ಎಂದರು.
ಅಸಂಘಟಿತ ವ್ಯಾಪಾರಿಗಳಿಗೆ ಒಂದು ಪ್ರತ್ಯೇಕ ವಲಯ ಅವಕಾಶಕ್ಕೆ ಪಾಲಿಕೆಯಲ್ಲಿ ಮಾತನಾಡಿದ್ದೆ. ಆದರೆ, ಆಯುಕ್ತರು ಏನೂ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಮತ್ತೆ ಪ್ರಶ್ನಿಸುತ್ತೇನೆ. ಅಧಿಕಾರಿಗಳು ಅಸಂಘಟಿತ ವ್ಯಾಪಾರಸ್ಥರನ್ನು ಗುರುತಿಸಬೇಕಾಗಿದೆ ಎಂದು ಹೇಳಿದರು.
ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರಿತವೋ ಎಂಬುದು ವರದಿ ನಂತರ ಗೊತ್ತಾಗಲಿದೆ. ಇಂತಹ ಘಟನೆಗಳಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ.
ಹಂಪಿಯಲ್ಲೂ ಒಂದು ಕೊಲೆ ಘಟನೆ ಜರುಗಿದ ಹಿನ್ನೆಲೆಯಲ್ಲಿ ಶೇ.80ರಷ್ಟು ಪ್ರವಾಸೋದ್ಯಮ ಇಳಿಕೆಯಾಗಿದೆ. ಆದ್ದರಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಪ್ರವಾಸಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.