ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ಗ್ರಾಮ ಘಟಕವನ್ನು ರೈತ ಮುಖಂಡ ಹೊನ್ನೂರು ಪ್ರಕಾಶ್ ಉದ್ಘಾಟಿಸಿದರು. ಮಂಜು ಕಿರಣ್, ಶಿರಮಳ್ಳಿ ಮಂಜುನಾಥ್ ಇತರರು ಇದ್ದರು.
ನಂಜನಗೂಡು: ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಮಾನವ ಹಾಗೂ ವನ್ಯಜೀವಿಗಳ ಸಂಘರ್ಷಕ್ಕೆ ಸರ್ಕಾರ ಕಡಿವಾಣ ಹಾಕಬೇಕಿದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ಆಗ್ರಹಿಸಿದರು.
ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ವನ್ಯಜೀವಿಗಳ ಸಂಘರ್ಷ ಮತ್ತು ಬೆಳೆ ನಾಶದ ಬಗ್ಗೆ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಕಾಡಂಚಿನ ರೈತರ ಹಿತಕ್ಕೆ ಅರಣ್ಯ ಇಲಾಖೆ ಸಚಿವರು, ಅಧಿಕಾರಿಗಳು, ಶಾಸಕರು, ಸಂಸದರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯಾಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ. ಸುಮಾರು ಮೂರು ನಾಲ್ಕು ತಿಂಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬಾಳೆ, ಕಲ್ಲಂಗಡಿ, ಹುರುಳಿ, ಟೊಮ್ಯಾಟೊ ಸೇರಿದಂತೆ ಹಲವು ಬೆಳೆಗಳನ್ನು ನಾಶ ಮಾಡುತ್ತಿದ್ದರೂ, ರಾತ್ರಿ ವೇಳೆ ಸರಿಯಾದ ರೀತಿಯಲ್ಲಿ ಗಸ್ತು ಕಾಯುವುದಿಲ್ಲ. ಹುಲಿಗಳ ಹಾವಳಿ ಮುಗಿಯಿತು ಎನ್ನುಷ್ಟರಲ್ಲಿ ಕಾಡಾನೆಗಳ ಹಾವಳಿ ಜೋರಾಗಿದೆ. ಇದರ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ರೈತರು ಸಂಘಟನೆಗೆ ಸೇರ್ಪಡೆಗೊಂಡರು. ಮಂಜು ಕಿರಣ್, ಶಿರಮಳ್ಳಿ ಮಂಜುನಾಥ್, ಸೇರಿದಂತೆ ಹಸಿರು ಸೇನೆಯ ಎಲ್ಲ ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರು, ಮುಖಂಡರು ಭಾಗವಹಿಸಿದ್ದರು.