ನಗರದ ಊಟಿ ರಸ್ತೆಯ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ತಂಡದೊಂದಿಗೆ ಶಾಸಕ ಟಿ.ಎಸ್. ಶ್ರೀವತ್ಸ, ಬಿ.ನಿರಂಜನಮೂರ್ತಿ, ಅಂಶಿ ಪ್ರಸನ್ನಕುಮಾರ್, ಎಂ.ಯೋಗೇಂದ್ರ, ಎಸ್.ನಂಜುಂಡಸ್ವಾಮಿ, ಜಿ.ರಮೇಶ್, ಟಿ.ಅರವಿಂದ ಇದ್ದರು. 
ಮೈಸೂರು

ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಮುಖ್ಯ

ಮೈಸೂರು: ವಿದ್ಯೆ ಜತೆಗೆ ಸಂಸ್ಕಾರವು ಮುಖ್ಯ. ವಿದ್ಯಾರ್ಥಿಗಳು ದೇಶ, ನಾಡು, ಗುರು ಹಿರಿಯರನ್ನು ಪ್ರೀತಿಸಬೇಕು. ದೇಶದ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯೆ ಸಾಧಕರ ಸ್ವತ್ತು. ವಿದ್ಯೆ ಒಂದಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಮೈಸೂರಿನಲ್ಲಿಯೇ ಹಲವಾರು ನಿದರ್ಶನಗಳಿವೆ. 11 ವರ್ಷದ ಬಾಲಕನೊಬ್ಬ ಸತತ 14 ಗಂಟೆಗಿಂತ ಹೆಚ್ಚು ವಿವೇಕಾನಂದರನ್ನು ಕುರಿತು ಮಾತನಾಡಿ ವಿಶ್ವ ದಾಖಲೆ ಮಾಡಿದ್ದಾನೆ. ಅದೇ ರೀತಿ ನೀವು ಕೂಡ ವಿದ್ಯೆಯನ್ನು ಚೆನ್ನಾಗಿ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠವು ಶಿಕ್ಷಣ ಮತ್ತು ಆರೋಗ್ಯದಲ್ಲಿ ಮಹತ್ತರ ಸಾಧನೆ ಮಾಡಿದೆ. ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ದೂರದೃಷ್ಟಿಯಿಂದ ಜನಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ. ಇದಕ್ಕಾಗಿ ಪೂಜ್ಯರಿಗೆ ಸಮಾಜ ಸದಾ ಋಣಿಯಾಗಿರಬೇಕು ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ಸಾಧಕರನ್ನು ಗೌರವಿಸುವುದು ಸಂಸ್ಕೃತಿಯ ಒಂದು ಭಾಗವಾಗಿದೆ. ಜನ್ಮದಾತರನ್ನು, ಗುರುಗಳನ್ನು ಗೌರವಿಸಿ. ವಿದ್ಯೆ ಜತೆಗೆ ವಿನಯವು ಇರಲಿ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ಯೋಗೇಂದ್ರ ಮಾತನಾಡಿ, ದೈಹಿಕ ಸಾಮರ್ಥ್ಯಕ್ಕೆ ಕ್ರೀಡೆಗಳು ಅವಶ್ಯ. ಆರೋಗ್ಯವಂತರಾಗಲು ಕ್ರೀಡೆಗಳಿಗೆ ಮಹತ್ವ ನೀಡಬೇಕು. ಕ್ರೀಡಾ ಕೋಟದಲ್ಲಿ ಉನ್ನತ ವ್ಯಾಸಂಗ, ಉದ್ಯೋಗಕ್ಕೂ ಅವಕಾಶವಿದೆ ಎಂದು ಹೇಳಿದರು.
ಪ್ರಾಂಶುಪಾಲ ಎಸ್.ನಂಜುಂಡಸ್ವಾಮಿ, ಸರಸ್ವತಿಪುರಂ ಜೆಎಸ್‌ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಗುರುಪಾದಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಿ.ರಮೇಶ್, ಕ್ರೀಡಾ ಸಂಚಾಲಕ ಟಿ.ಅರವಿಂದ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇದ್ದರು.