- ಜಿಲ್ಲಾಡಳಿತದಿಂದ ಸಿದ್ಧತೆ ಜೋರು
ಜಿಲ್ಲಾಡಳಿತ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ನಗರದ ವಿವಿಧ ಯೋಗ ಸಂಸ್ಥೆಗಳಿಂದ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ನಗರದಲ್ಲಿ ಆಯೋಜಿಸಲು ಮುಂದಾಗಿದ್ದು, ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗಾಸನ ಕಂಪು ದೊಡ್ಡ ಮಟ್ಟದಲ್ಲಿ ಬೀರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಪ್ರಮುಖ ಕಾರಣ ಎನ್ನುವುದನ್ನು ಮರೆಯಬಾರದು. ‘ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೋ ಮಾತು ಎಷ್ಟು ನಿಜವೋ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ನೀಡದ ಕ್ಷೇತ್ರವೇ ಇಲ್ಲ ಎನ್ನುವುದು ಅಷ್ಟೇ ಸತ್ಯ. ಮೈಸೂರಿನ ಸುವರ್ಣ ಯುಗಕ್ಕೆ ಕಾರಣರಾದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಅಧಿವೃದ್ಧಿಯ ಜತೆಗೆ ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯಕ್ಕೆ ಅವರ ಕೊಡಗೆ ಅಪಾರ. ಅಷ್ಟೇ ಅಲ್ಲ! ಮೈಸೂರಿನಲ್ಲಿ ಯೋಗ ಅರಳಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಕಾರಣ ಎನ್ನುವುದು ವಿಶೇಷ.
ಶತಮಾನದ ಹಿಂದೆಯೇ ಮೈಸೂರು ಪ್ರಾಂತ್ಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಯೋಗದ ಅಭಿವೃದ್ಧಿಗೂ ಕೊಡುಗೆ ನೀಡಿರುವುದನ್ನು ಹಾಗೂ ಮೈಸೂರು ಯೋಗ ಶಿಕ್ಷಕರ ಕೊಡುಗೆಯನ್ನು ಅಂತಾರಾಷ್ಟ್ರೀಯ ಯೋಗ ದಿನ ಸಮಯದಲ್ಲಿ ಸ್ಮರಿಸಬೇಕಿದೆ.
ಪ್ರತಿವರ್ಷ ಜೂ.21ರಂದು ವಿಶ್ವ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಅಂತೆಯೇ ಮತ್ತೊಂದು ಯೋಗ ದಿನದ ಆಚರಣೆಗೆ ಹತ್ತಿರವಾಗುತ್ತಿದ್ದೇವೆ. ಅದಕ್ಕೆ ಸಿದ್ಧತೆಯೂ ಜೋರಾಗಿದೆ. ಇಂತಹ ವಿದ್ಯೆಯನ್ನು ಶತಮಾನಗಳಿಂದ ಇಡೀ ವಿಶ್ವಕ್ಕೆ ಕಲಿಸುತ್ತಿರುವ ಕೀರ್ತಿ ಮೈಸೂರು ಹಾಗೂ ಮೈಸೂರಿನ ಯೋಗ ಗುರುಗಳಿಗೆ ಸಲ್ಲುತ್ತದೆ. ಮೈಸೂರು ನಗರ ವಿವಿಧ ಸಂಸ್ಕೃತಿ, ಆಚಾರ-ವಿಚಾರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದು ಅನೇಕ ವರ್ಷಗಳಿಂದ ಪ್ರಪಂಚದಾದ್ಯಂತ ಯೋಗದ ಕಂಪನ್ನು ಪಸರಿಸುತ್ತಾ ಬಂದಿದೆ. ಹೀಗಾಗಿ ಮೈಸೂರು ‘ಯೋಗ ನಗರಿ’ ಎಂದೇ ಪ್ರಖ್ಯಾತಿ ಪಡೆದಿದೆ.
ಮೈಸೂರು ಸಂಸ್ಥಾನದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿಯೇ ರಾಜಮನೆತನದವರು ಯೋಗ ಕಲಿಯುತ್ತಿದ್ದ ಉದಾಹರಣೆಗಳಿವೆ. ಬಳಿಕ ಯೋಗವನ್ನು ಸಾರ್ವಜನಿಕವಾಗಿ ಅಭಿವೃದ್ಧಿಪಡಿಸುವ ಜತೆಗೆ, ಮೈಸೂರಿನಲ್ಲಿ ಯೋಗ ಹಾಗೂ ಯೋಗ ಗುರುಗಳಿಗೆ ನೆಲೆ ಕೊಡಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲಬೇಕು. ಯೋಗದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಅವರು ಮದ್ರಾಸಿನಿಂದ ಕೃಷ್ಣಮಾಚಾರ್ಯರನ್ನು ಮೈಸೂರಿಗೆ ಕರೆಸಿ ಯೋಗ ಅಭಿವೃದ್ಧಿಗೆ ಕಾರಣರಾದರು. ಅವರ ಬಹುತೇಕ ಕೃತಿಗಳಲ್ಲಿ ಯೋಗದ ಬಗ್ಗೆ ಉಲ್ಲೇಖಿಸಿದ್ದಾರೆ.
ನಾಲ್ವಡಿ ಅವರು ಸಂಸ್ಕೃತ ಪಾಠಶಾಲೆಯಲ್ಲಿ ಯೋಗಕ್ಕೆ ಪ್ರತ್ಯೇಕ ವಿಭಾಗವನ್ನೇ ಸ್ಥಾಪಿಸಿದ್ದರು. ಅದಕ್ಕೆ ಕೃಷ್ಣಮಾಚಾರ್ಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿ, ಜಗನ್ಮೋಹನ ಅರಮನೆ ಹಿಂಭಾಗ ಅವರ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಕೃಷ್ಣಮಾಚಾರ್ಯರು ಅರಸು ಮನೆತನದವರು ಹಾಗೂ ಸಾರ್ವಜನಿಕರಿಗೆ ಯೋಗ ಕಲಿಸುತ್ತಿದ್ದರು. ಅವರೇ ಮುಂದೆ ಮೈಸೂರು ಪ್ರಾಂತ್ಯದ ಯೋಗ ಶಿಕ್ಷಕರ ಮೂಲ ಗುರುಗಳಾದರು. ಅವರ ನೇರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಬಿಎನ್‌ಎಸ್ ಅಯ್ಯಂಗಾರ್ ‘ಅಷ್ಟಾಂಗ ವಿನ್ಯಾಸ ಯೋಗ’ವನ್ನು ವಿಶ್ವಾದ್ಯಂತ ಪ್ರಚುರಪಡಿಸಿದ್ದಾರೆ.
ಸದ್ಯ ಕೇಶವಮೂರ್ತಿ, ಶಂಕರನಾರಾಯಣ ಜೋಯಿಸ್, ಬಿಎನ್‌ಎಸ್ ಅಯ್ಯಂಗಾರ್ ಮೈಸೂರಿನಲ್ಲಿರುವ ಹಿರಿಯ ಯೋಗ ಗುರುಗಳಾಗಿದ್ದಾರೆ. ಜತೆಗೆ ರಾಘವೇಂದ್ರ ಪೈ, ಡಾ.ಯೋಗ ಗಣೇಶ್‌ಕುಮಾರ್, ಜಲೇಂದ್ರ ಕುಮಾರ್, ಶ್ರೀಹರಿ, ಅನಂತು, ಶಶಿಕುಮಾರ್, ಎಂ.ಎಸ್.ರಮೇಶ್‌ಕುಮಾರ್, ಎಚ್.ಟಿ.ಭಾಸ್ಕರ್, ಗೀತಾ ಕುಮಾರ್ ಸೇರಿದಂತೆ ಅನೇಕ ಹಿರಿಯರು ಯೋಗ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಯೋಗ ಪರಂಪರೆ ಹೊಂದಿರುವ ಮೈಸೂರಿನಲ್ಲೀಗ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಹಿಮಾಲಯ ಯೋಗ ಫೌಂಡೇಷನ್, ಮೈಸೂರು ಯೋಗ ಒಕ್ಕೂಟ, ಮಾರುತಿ ಯುವ ಕೇಂದ್ರ, ವೈಎಸ್‌ಎಫ್, ಜಿಎಸ್‌ಎಸ್ ಯೋಗ ಫೌಂಡೇಷನ್, ಭಾರತ್ ಸ್ವಾಭಿಮಾನಿ ಟ್ರಸ್ಟ್ ಬಾಬಾ ರಾಮದೇವ್ ಯೋಗ, ಪತಂಜಲಿ ಸೇರಿದಂತೆ ನೂರಾರು ಯೋಗ ಕೇಂದ್ರಗಳಿದ್ದು, ಯೋಗ ಪ್ರಚಾರ ಮಾಡುತ್ತಿವೆ ಎನ್ನುತ್ತಾರೆ ಯೋಗ ಶಿಕ್ಷಕ ಎಚ್.ಪಿ.ನವೀನ್‌ಕುಮಾರ್.
‘ಅಷ್ಟಾಂಗ ವಿನ್ಯಾಸ’ದಲ್ಲಿ ಅಪಾರ ಹೆಸರು
ಮೈಸೂರು ಪ್ರಪಂಚದಲ್ಲೇ ‘ಅಷ್ಟಾಂಗ ವಿನ್ಯಾಸ ಯೋಗ’ದಲ್ಲಿ ಹೆಚ್ಚು ಹೆಸರು ಮಾಡಿದೆ. ಇಲ್ಲಿ ಅಪಾರ ಅನುಭವಿ ಯೋಗ ಶಿಕ್ಷಕರು, ಯೋಗಪಟುಗಳು ಇದ್ದು, ವರ್ಷಪೂರ್ತಿ ಯೋಗ ಸ್ಪರ್ಧೆಗಳು, ಯೋಗ ಶಿಬಿರಗಳು, ಯೋಗ ತರಗತಿಗಳು ನಡೆಯುತ್ತಲೇ ಇರುತ್ತವೆ. ನಗರದ ಅನೇಕ ಯೋಗಾಪಟುಗಳು ಚೀನಾ, ಜಪಾನ್, ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತ ಯೋಗ ಕಲಿಸುತ್ತಿದ್ದಾರೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದ ಯೋಗಪಟುಗಳಾದ ಸುರಭಿ, ಸೌರಭಾ, ಅಂಕಿತಾ, ವರ್ಷ, ಮಹೇಂದ್ರ, ಶ್ರೀಕಂಠ, ಕಿರಣ್, ಸುಷ್ಮಿತಾ, ಸುರೇಶ್, ವಿಕ್ರಂ, ಭಾಗ್ಯಾ, ಪ್ರೇಮಾ, ಜನಾರ್ದನ್, ಮದನ್, ಖುಷಿ ಸೇರಿದಂತೆ ಅಪಾರ ಪ್ರತಿಭೆಗಳೂ ಮೈಸೂರಿನಲ್ಲಿ ಇದ್ದಾರೆ.
"
ಪ್ರತಿವರ್ಷ ಜೂ.21ರಂದು ವಿಶ್ವ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಅಂತೆಯೇ ಮತ್ತೊಂದು ಯೋಗ ದಿನದ ಆಚರಣೆಗೆ ಹತ್ತಿರವಾಗುತ್ತಿದ್ದೇವೆ. ಅದಕ್ಕೆ ಸಿದ್ಧತೆಯೂ ಜೋರಾಗಿದೆ. ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ವಿದ್ಯೆಯಾಗಿರುವುದೇ ಇದಕ್ಕೆ ಮೂಲ ಕಾರಣ. ಇಂತಹ ವಿದ್ಯೆಗೆ ಮೈಸೂರು ಮೂಲ ಬೇರು ಎಂದರೆ ತಪ್ಪಾಗಲಾರದು. ಮೈಸೂರಿನಲ್ಲಿ ಯೋಗ ಮುನ್ನೆಲೆಗೆ ಬರಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ಕೃಷ್ಣಮಾಚಾರ್ಯರ ನೇರ ಶಿಷ್ಯರಾದ ಬಿಕೆಎಸ್ ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಬಿಎನ್‌ಎಸ್ ಅಯ್ಯಂಗಾರ್ ‘ಅಷ್ಟಾಂಗ ವಿನ್ಯಾಸ ಯೋಗ’ವನ್ನು ವಿಶ್ವಾದ್ಯಂತ ಪ್ರಚುರಪಡಿಸಿದ್ದಾರೆ.
— ಎಚ್.ಪಿ.ನವೀನ್ ಕುಮಾರ್, ಯೋಗ ಶಿಕ್ಷಕ