ಮಹಾರಾಜ ಟ್ರೋಫಿಗೆ ಸಾಂಸ್ಕೃತಿಕ ನಗರಿ ಸಜ್ಜು  
ಮೈಸೂರು

ಮಹಾರಾಜ ಟ್ರೋಫಿಗೆ ಸಾಂಸ್ಕೃತಿಕ ನಗರಿ ಸಜ್ಜು

ಪ್ರಮುಖ ಮುಖ್ಯಾಂಶಗಳು

  • 20ರಿಂದ ಜು.12ರವರೆಗೆ ಟಿ-20 ಕ್ರಿಕೆಟ್ ಪಂದ್ಯಾವಳಿ
  • ಈ ಬಾರಿ ಪ್ರೇಕ್ಷಕರಿಗೂ ವೀಕ್ಷಣೆ ಅವಕಾಶ ಸಾಧ್ಯತೆ
ಅವಿನಾಶ್ ಜೈನಹಳ್ಳಿ ಮೈಸೂರು
ಸತತ ಎರಡು ತಿಂಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಗುಂಗಿನಲ್ಲಿ ಮಿಂದೆದ್ದಿರುವ ಮೈಸೂರು ಭಾಗದ ಕ್ರಿಕೆಟ್ ಅಭಿಮಾನಿಗಳು ಈಗ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಯ ಅಲೆಯಲ್ಲಿ ತೇಲಲು ವೇದಿಕೆ ಸಿದ್ಧವಾಗುತ್ತಿದೆ.
ರಾಜ್ಯದ ಬಹು ದೊಡ್ಡ ಕ್ರಿಕೆಟ್ ಹಬ್ಬವಾಗಿರುವ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿಗೆ ಸಾಂಸ್ಕೃತಿಕ ನಗರಿ ಮೈಸೂರು ಮತ್ತೆ ಆತಿಥ್ಯ ವಹಿಸಲು ಮುಂದಾಗಿದೆ.
ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಚಿಮ್ಮು ಹಲಗೆಯಾಗಿರುವ ಮಹಾರಾಜ ಟ್ರೋಫಿ ಟೂರ್ನಿಯು ಜೂ. 20ರಿಂದ ಜು. 12ರವರೆಗೆ ಮೂರು ಹಂತಗಳಲ್ಲಿ ಜರುಗಲಿದ್ದು, ಈ ಪೈಕಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉದ್ಘಾಟನಾ ಪಂದ್ಯಗಳು ನಡೆಯಲಿವೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಟೂರ್ನಿಯ ಮೊದಲ 12 ಪಂದ್ಯಗಳು ಜೂ. 20ರಿಂದ 25ರವರೆಗೆ ನಡೆಯಲಿವೆ. ರಾಜ್ಯ ಕ್ರಿಕೆಟ್ ಸಂಸ್ಥೆ ಈಗಾಗಲೇ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌, ಕೋಸ್ಟಲ್ ಕಿಂಗ್ಸ್ ಮಂಗಳೂರು, ಗುಲ್ಬರ್ಗಾ ಮಿಸ್ಟಿಕ್ಸ್, ಹುಬ್ಬಳ್ಳಿ ಟೈಗರ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌ ಮತ್ತು ಶಿವಮೊಗ್ಗ ಯೋಧಾಸ್ ತಂಡಗಳು ಭಾಗವಹಿಸಲಿವೆ.
ಟೂರ್ನಿ ಆಯೋಜನೆಗಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನವನ್ನು ಒಂದು ತಿಂಗಳಿಂದ ಸೂಕ್ತವಾಗಿ ನಿರ್ವಹಣೆ ಮಾಡಿ ಇಡೀ ಮೈದಾನವನ್ನು ಹಸಿರೀಕರಣಗೊಳಿಸಿ, ಪಿಚ್ ಸಿದ್ಧ ಪಡಿಸಲಾಗುತ್ತಿದೆ. ಪೆವಿಲಿಯನ್ ಕಟ್ಟಡಗಳಿಗೆ ಬಣ್ಣ ಬಳಿಯಲಾಗುತ್ತಿದೆ. ಹಾಳಾಗಿರುವ ಪ್ರೇಕ್ಷಕರ ಗ್ಯಾಲರಿ, ಶೌಚಗೃಹ ಸೇರಿ ಎಲ್ಲ ರೀತಿಯ ಕೆಲಸಗಳನ್ನು ಮಾಡಲಾಗುತ್ತದೆ. 10ಕ್ಕೂ ಹೆಚ್ಚು ಮಂದಿ ಸೇರಿ ಪಿಚ್ ಮತ್ತು ಮೈದಾನವನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ.
ಕಳೆದ ಒಂದೂವರೆ ತಿಂಗಳಿಂದ ಮೈದಾನವನ್ನು ಸಿದ್ಧಗೊಳಿಸಲಾಗುತ್ತಿದೆ. ಹುಲ್ಲು ಸರಿಯಾಗಿ, ಒಂದೇ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಕೆಎಸ್‌ಸಿಎ ಮೈಸೂರು ವಿಭಾಗ ಸಂಚಾಲಕ ಶ್ರೀನಿವಾಸ್ ಪ್ರಸಾದ್.

ಫ್ಲಡ್ ಲೈಟ್‌ಗಳ ಬಲ್ಬ್ ಬದಲಾವಣೆ

ಮೈದಾನದಲ್ಲಿ ಹಗಲು-ರಾತ್ರಿ ಪಂದ್ಯಗಳನ್ನು ಆಯೋಜಿಸುವ ದೃಷ್ಟಿಯಿಂದ 12 ವರ್ಷಗಳ ಹಿಂದೆ ಮೈದಾನದಲ್ಲಿ ನಾಲ್ಕು ಫ್ಲಡ್ ಲೈಟ್ ಕಂಬಗಳನ್ನು ಅಳವಡಿಸಲಾಗಿದ್ದು, ಈಗ ಟೂರ್ನಿಗಾಗಿ ಮೊದಲ ಬಾರಿಗೆ ನಾಲ್ಕು ಫ್ಲಡ್ ಲೈಟ್ ಕಂಬಗಳ ಎಲ್‌ಇಡಿ ಬಲ್ಬ್‌ಗಳನ್ನು ಬದಲಾಯಿಸಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಿಂದ ತಂದಿರುವ ಹೊಸ ಎಲ್‌ಇಡಿ ಬಲ್ಬ್‌ಗಳನ್ನು ಹಾಕಲಾಗುತ್ತಿದೆ. ಒಂದೊಂದು ಕಂಬಗಳಲ್ಲೂ ತಲಾ 60 ಎಲ್‌ಇಡಿ ಬಲ್ಬ್‌ಗಳನ್ನು ಬದಲಾಯಿಸಲಾಗುತ್ತಿದೆ.

ಅಭಿಮಾನಿಗಳೂ ಕಣ್ತುಂಬಿಕೊಳ್ಳಬಹುದೇ?

ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಎಲ್ಲ ಪಂದ್ಯಗಳ ವೀಕ್ಷಣೆಗೆ ಅಭಿಮಾನಿಗಳಿಗೂ ಅವಕಾಶ ದೊರೆಯುವ ಸಾಧ್ಯತೆ ಇದೆ. ಐಪಿಎಲ್ 18ರ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾಗಿದ್ದರು. ಈ ಘಟನೆ ಬಳಿಕ ಬೆಂಗಳೂರಿನಲ್ಲಿ ಕ್ರಿಕೆಟ್ ಆಯೋಜನೆ, ದೊಡ್ಡ ಸಮಾರಂಭಗಳು, ರ‌್ಯಾಲಿಗಳಿಗೆ ಅನುಮತಿ ನೀಡಲು ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕ್ರಮ ತೆಗೆದುಕೊಂಡಿದ್ದರು. ಹಾಗಾಗಿ, ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟ್ರೋಫಿ ಕ್ರಿಕೆಟ್ ಆಯೋಜಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಅನುಮತಿ ನೀಡಿರಲಿಲ್ಲ. ಹೀಗಾಗಿ ಎಲ್ಲ ಪಂದ್ಯಗಳನ್ನು ಮೈಸೂರಿಗೆ ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಮಹಾರಾಜ ಟ್ರೋಫಿಯ 30 ಲೀಗ್, ಕ್ವಾಲಿಫೈಯರ್-1, ಎಲಿಮಿನೇಟರ್, ಕ್ವಾಲಿಫೈಯರ್-2, ಫೈನಲ್ ಸೇರಿದಂತೆ ಒಟ್ಟು 34 ಪಂದ್ಯಗಳು ಕ್ರಿಕೆಟ್ ಅಭಿಮಾನಿಗಳಿಲ್ಲದೆ ನಡೆದಿದ್ದವು. ಫ್ರ್ಯಾಂಚೈಸಿಗಳು, ಕೆಎಸ್‌ಸಿಎ ಪದಾಧಿಕಾರಿಗಳು, ಸದಸ್ಯರು ಮಾತ್ರ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದರು.
ಆದರೆ, ಈ ಬಾರಿ ಈಗಾಗಲೇ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆದಿದ್ದು, ಎಲ್ಲ ಪಂದ್ಯಗಳ ವೀಕ್ಷಣೆಗೆ ಅಭಿಮಾನಿಗಳಿಗೂ ಅನುಮತಿ ನೀಡಲಾಗಿತ್ತು. ಹಾಗಾಗಿ, ಮಹಾರಾಜ ಟೂನಿರ್ಯ ಎಲ್ಲ ಪಂದ್ಯಗಳ ವೀಕ್ಷಣೆಗೆ ಅಭಿಮಾನಿಗಳಿಗೂ ಅವಕಾಶ ಕಲ್ಪಿಸವ ಸಂಬಂಧ ಪೊಲೀಸ್ ಇಲಾಖೆಯ ಅನುಮತಿ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಕೆಎಸ್‌ಸಿಎ ಪದಾಧಿಕಾರಿಗಳು ಪೊಲೀಸ್ ಇಲಾಖೆಯ ಅನುಮತಿ ಕೋರಲು ಮುಂದಾಗಿದ್ದಾರೆ.
"

ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯು ಜೂ.20ರಿಂದ ಜು.12ರವರೆಗೆ ಮೂರು ಹಂತದಲ್ಲಿ ನಡೆಯಲಿದ್ದು, ಈ ಪೈಕಿ ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಜೂ. 20ರಿಂದ 25ರವರೆಗೆ 12 ಪಂದ್ಯಗಳು ನಡೆಯಲಿವೆ. ಈ ಸಂಬಂಧ ಒಂದು ತಿಂಗಳಿಂದ ಮೈದಾನ ಸಜ್ಜುಗೊಳಿಸಲಾಗುತ್ತಿದೆ.

— ಪಿ.ಶ್ರೀನಿವಾಸ್ ಪ್ರಸಾದ್ ಕೆಎಸ್‌ಸಿಎ ಮೈಸೂರು ವಿಭಾಗದ ಸಂಚಾಲಕ