ನಂಜನಗೂಡು ತಾಲೂಕಿನ ಹುಸ್ಕೂರು ಗ್ರಾಮದ ಕೆರೆಯಲ್ಲಿ ಕಾಣಿಸಿಕೊಂಡಿರುವ ಮೊಸಳೆ.  
ಮೈಸೂರು

ಹುಸ್ಕೂರು ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

ವಸಂತಕುಮಾರ್ ಬಿ
ನಂಜನಗೂಡು: ತಾಲೂಕಿನ ಹುಸ್ಕೂರು ಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಕೂಗಳತೆ ದೂರದಲ್ಲಿ ಕೆರೆಯಿದ್ದು, ಕಳೆದ 3 ದಿನಗಳಿಂದ ಕೆರೆ ಆವರಣದೊಳಗೆ ಮೊಸಳೆ ತಿರುಗಾಡುತ್ತಿರುವ ದೃಶ್ಯ ಗ್ರಾಮಸ್ಥರಿಗೆ ಕಣ್ಣಿಗೆ ಬಿದ್ದಿದೆ. ಮೂರು ದಿನಗಳಿಂದಲೂ ಪ್ರತ್ಯಕ್ಷವಾಗಿ ಗಮನಿಸಿದ ನಂತರ ಮೊಸಳೆ ಎಂಬುದು ದೃಢಪಟ್ಟಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಧನಂಜಯ್ ಮತ್ತು ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಕೆರೆಯಲ್ಲಿ ಪರಿಶೀಲಿಸಿದರು.

ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಹುಸ್ಕೂರ್ ಗಿರೀಶ್ ಮಾತನಾಡಿ, ಗ್ರಾಮದ ಕೆರೆಯಲ್ಲಿ ಕಳೆದ 2-3 ದಿನಗಳಿಂದ ಮೊಸಳೆ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿತ್ತು. ಆದರೆ ಇಲಾಖೆಯವರು ತಕ್ಷಣವೇ ಸ್ಪಂದಿಸುವುದಿಲ್ಲ. ಇದರಿಂದ ಗ್ರಾಮಸ್ಥರು ಮತ್ತು ರೈತರು ಕೆರೆಯ ಬಳಿ ಮತ್ತು ಜಮೀನಿಗೆ ತೆರಳಲು ಆತಂಕಗೊಂಡಿದ್ದಾರೆ. ಜತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಮತ್ತು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ವಿಷಯ ಮುಟ್ಟಿಸಿದ ತಕ್ಷಣವೇ ಸ್ಥಳಕ್ಕೆ ಬಂದು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.